ಹೊಸದಿಗಂತ ವರದಿ ಶಿಗ್ಗಾವಿ:
ಹಿಂದೂ ಸಮಾಜ, ಸಂಸ್ಕೃತಿ ಉಳಿದಾಗ ಮಾತ್ರ ಶಿವನೂ ಉಳಿಯುತ್ತಾನೆ. ಶಿವನ ಪೂಜೆಗೆ ಎಷ್ಟು ಮಹತ್ವವಿದಯೋ ಅಷ್ಟೇ ಮಹತ್ವ ಸಮಾಜ ದೇವನ ಪೂಜೆಗೂ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ ಅರುಣ ಕುಮಾರ ಹೇಳಿದರು.
ಗೋಟಗೊಡಿಯ ರಾಕ್ ಗಾರ್ಡನ್‌ನಲ್ಲಿ ಶಿವರಾತ್ರಿ ನಿಮಿತ್ತ ಪ್ರಜ್ಞಾ ಪ್ರವಾಹ ಸಂಘಟನೆಯಿಂದ ನಡೆದ ಶಿವೋಹಮ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ’ಶಿವಂ ಭೂತ್ವಾ ಶಿವಂ ಯಜೇತ್’ ಎಂಬ ಉಕ್ತಿಯಂತೆ ಶಿವನಂತೆ ಯಾರು ಇರುತ್ತಾರೋ ಅವರು ಶಿವನಿಗೆ ಹತ್ತಿರವಾಗುತ್ತಾರೆ. ವೈಚಾರಿಕ ಸಂಘರ್ಷದ ಪ್ರಸ್ತುತ ಯುಗದ ವಾಸ್ತವ ಸ್ಥಿತಿ ನಾವು ಅರಿಯಬೇಕಾದ ಅವಶ್ಯಕತೆ ಇದೆ. ಜಗತ್ತಿನಲ್ಲಿ ಅನಾಚಾರಗಳು ನಡೆದಾಗ ಹೇಗೆ ಶಿವ ದುಷ್ಟ ಶಕ್ತಿಗಳನ್ನು ನಾಶ ಮಾಡಿದನೋ ಹಾಗೆಯೇ ನಾವೂ ಕೂಡ ಧರ್ಮದ ರಕ್ಷಣೆಗೆ ಮತ್ತು ದುಷ್ಟ ಶಕ್ತಿಗಳ ನಿಗ್ರಹಕ್ಕೆ ಶಿವನ ಗುಣಗಳನ್ನು ಮೈತಾಳಬೇಕು ಎಂದರು.
ಇಸ್ಲಾಂನ ಮತಾಂತರ, ಕ್ರೈಸ್ತರ ಹಿಂದೂ ಪ್ರಜ್ಞೆಯ ಮೇಲಿನ ದಾಳಿ ಇವುಗಳ ಮೂಲ ಅರಿಯುವ ಪ್ರಯತ್ನವಾಗಬೇಕು. ಹಿಂದೂ ಸಮಾಜ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುತ್ತ, ನಿರಂತರವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಸಂಘರ್ಷಕ್ಕೆ ತಕ್ಕ ಉತ್ತರ ನೀಡಬೇಕು. ಹೇಗೆ ಅಭಿಷೇಕ, ಲಿಂಗ ಪೂಜೆ ಮಾಡುವ ಮೂಲಕ ಶಿವನನ್ನು ಆರಾಧಿಸುತ್ತೆವೆಯೋ ಅದೇ ರೀತಿ ಸಮಾಜ ದೇವನ ಪೂಜೆಯೂ ಆಗಬೇಕು.
ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುವುದು ಕೂಡ ಶಿವನ ಪೂಜೆಯಾಗಿದೆ. ಶ್ರೀರಾಮ-ಶಿವನ ಮಂದಿರಗಳನ್ನು ಸಾಕಷ್ಟು ನಿರ್ಮಿಸಬಹುದು ಆದರೆ ಮಂದಿರ ನಿರ್ಮಾಣವಾದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ. ಶ್ರೀರಾಮ-ಶಿವನ ಸದ್ಗುಣಗಳು ನಮ್ಮಲ್ಲೂ ಅಡಕವಾಗಬೇಕು. ಶಿವ ಶಾಶ್ವತ, ಅವನು ಮೃತ್ಯುಂಜಯ ಅವನ ಗುಣ ಮೈಗೂಡಿಸಿಕೊಳ್ಳುವ ಮೂಲಕ ದೇಶ ಒಡೆಯುವ ದುಷ್ಟ ಶಕ್ತಿಗಳ ವಿರುದ್ಧ ಜಯ ಸಾಧಿಸಬೇಕು ಎಂದು ಹೇಳಿದರು.