ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ 10 ದಿನಗಳವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಆರಂಭವಾಗಲಿದೆ.
ಈಗಾಗಲೇ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಈಗಾಗಲೇ ಎಲ್ಲ ಪರಿಶೀಲನೆ ನಡೆಸಿದ್ದಾರೆ.
ನಿನ್ನೆಯಷ್ಟೇ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಇದು ಇಂದಿನ ಅಧಿವೇಶನದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಾರಿ ನಾಡಿನ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ಬಗ್ಗೆ ಅರ್ಥಪೂರ್ಣ ಚರ್ಚೆ ಮಾಡಲಾಗುವುದು ಎಂದು ಯು.ಟಿ ಖಾದರ್ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಮಾತನಾಡಲು ವಿಪಕ್ಷಗಳು ಸಜ್ಜಾಗಿವೆ, ಅದರಲ್ಲಿಯೂ ಉತ್ತರ ಭಾರತದಲ್ಲಿ ಗೆಲುವು ಸಾಧಿಸಿರುವ ಜೋಷ್‌ನಲ್ಲಿ ಬಿಜೆಪಿ ಹೆಚ್ಚೇ ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಸರ್ಕಾರದ 60 ವೈಫಲ್ಯಗಳು, ಬರದ ವಿಷಯದಲ್ಲಿ ಸರ್ಕಾರ ವಿಫಲ, ಡಿಕೆಶಿ ಕೇಸ್, ಲೋಡ್ ಶೆಡ್ಡಿಂಗ್, ಜಾತಿಗಣತಿ ಮುಂತಾದ ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದೆ.
ಈ ಬಾರಿ ಕಲಾಪ ವೀಕ್ಷಣೆಗೆ ಬರುವ ಶಾಲಾ ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು. ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಖಾದರ್ ಮಾಹಿತಿ ನೀಡಿದ್ದಾರೆ.