ಬೇಲೆಕೇರಿ ಅದಿರು ಅಕ್ರಮ ಸಾಗಾಟ ಕೇಸ್: ಕಾಂಗ್ರೆಸ್ ಶಾಸಕ ಸತೀಶ್​ ಸೈಲ್​​ಗೆ 7 ವರ್ಷ ಜೈಲು ಶಿಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್​ ಸೈಲ್​​ಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬೇಲೇಕೆರಿ ಅಧಿರು ನಾಪತ್ತೆ ಪ್ರಕರಣದ ಎಲ್ಲಾ 6 ಕೇಸ್ ಗಳಲ್ಲಿಯೂ ಕಾರವಾರ-ಅಂಕೋಲಾ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ಎರಡು ದಿನಗಳ ಹಿಂದೆ ತೀರ್ಪು ಪ್ರಕಟಿಸಿತ್ತು. ಶಿಕ್ಷೆ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.

ಇದೀಗ ನ್ಯಾ.ಸಂತೋಷ್ ಗಜಾನನ ಭಟ್ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, 6 ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 44 ಕೋಟಿಗೂ ಅಧಿಕ ದಂಡ ವಿಧಿಸಿದೆ.

ಒಳಸಂಚು ಆರೋಪದ ಅಡಿ 5 ವರ್ಷ ಜೈಲು ಶಿಕ್ಷೆ, ವಂಚನೆ ಕೇಸ್ ನಲ್ಲಿ 7 ವರ್ಷ ಕಠಿಣ ಶಿಕ್ಷೆ, ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು 4,5 ಹಾಗೂ 6ನೇ ಕೇಸ್ ನಲ್ಲಿ ಕೂಡ ಶಿಕ್ಷೆ ವಿಧಿಸಿದೆ. ಎಲ್ಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 44 ಕೋಟಿ ದಂಡ ವಿಧಿಸಿದ ಕೋರ್ಟ್ ದಂಡದ ಮೊತ್ತವನ್ನು ಸರ್ಕಾರಕ್ಕೆ ಜಪ್ತಿ ಮಾಡಿಕೊಳ್ಳಲು ಆದೇಶ ನೀಡಿದೆ.

ಮೊದಲ ಪ್ರಕರಣದಲ್ಲಿ 6 ಕೋಟಿ ರೂಪಾಯಿ ದಂಡ, ಎರಡನೇ ಪ್ರಕರಣದಲ್ಲಿ 9.60 ಕೋಟಿ ರೂಪಾಯಿ ದಂಡ, ಮೂರನೇ ಪ್ರಕರಣದಲ್ಲಿ 9.36, ಕೋಟಿ ರೂಪಾಯಿ ದಂಡ, ನಾಲ್ಕನೇ ಪ್ರಕರಣದಲ್ಲಿ 9.54 ಕೋಟಿ ರೂಪಾಯಿ ದಂಡ, ಐದನೇ ಪ್ರಕರಣದಲ್ಲಿ 9.25 ಕೋಟಿ ರೂಪಾಯಿ ದಂಡ ಹಾಗೂ ಆರನೇ ಪ್ರಕರಣದಲ್ಲಿ 90 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

ಸತೀಶ್ ಸೈಲ್‌ ಜತೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ಖಾರದಪುಡಿ ಮಹೇಶ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!