ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಡೆಕಾಯಿ ಒಂದು ಉಕೃಷ್ಟು ತರಕಾರಿ. ಹಾಲು ಬೆಂಡೆ ಅಥವಾ ಬಿಳಿ ಬೆಂಡೆಕಾಯಿ ರುಚಿ ಜಾಸ್ತಿ. ಬೆಂಡೆಯ ವೈವಿಧ್ಯಮಯ ಪದಾರ್ಥಗಳನ್ನು ಮಾಡಬಹುದು. ಅದರಲ್ಲೂ ಬ್ರಾಹ್ಮಣರ ಶೈಲಿಯ ಮಜ್ಜಿಗೆ ಹುಳಿ (ಹುಳಿ ಮೇಲಾರ) ಅದ್ಭುತ ರುಚಿಯ ಪದಾರ್ಥ. ಲೋಳೆಯಿಲ್ಲದೆ ಬೆಂಡೆಕಾಯಿ ಮಜ್ಜಿಗೆ ಹುಳಿ ಮಾಡೋದನ್ನು ಇವತ್ತು ನೋಡೋಣ.
ಬೇಕಾಗುವ ಸಾಮಾಗ್ರಿ:
ಅರ್ಧ ಕೆಜಿ ಬೆಂಡೆಕಾಯಿ, ಕಿವುಚಿದ ಹುಣಸೆ ಹುಳ್ಳಿ ರಸ ಅರ್ಧ ಕಪ್, ತೆಂಗಿನ ಕಾಯಿ ತುರಿ ನಾಲ್ಕು ಕಪ್, ಅರಶಿನ ಹುಡಿ, ಮೆಣಸಿನ ಹುಡಿ ತಲಾ ಒಂದು ಸ್ಪೂನ್, ಹಸಿಮೆಣಸಿನ ಕಾಯಿ ಮೂರು, ಹುಳಿ ಮಜ್ಜಿಗೆ ಒಂದು ಕಪ್.
ಮಾಡುವ ವಿಧಾನ:
ಸರಿಯಾಗಿ ತೊಳೆದು ಒಣ ಬಟ್ಟೆಯಲ್ಲಿ ಬೆಂಡೆಕಾಯಿಯನ್ನು ಒರೆಸಿ ಗಾಳಿಗೆ ಆರಲು ಬಿಡಿ. ನಂತರ ಚಕ್ರಾಕಾರದಲ್ಲಿ ಬೆಂಡೆಯಾಯಿನ್ನು ಹೆಚ್ಚಿಟ್ಟುಕೊಳ್ಳಿ. ಸ್ಟೌ ಮೇಲೆ ಪಾತ್ರೆಯಿಟ್ಟು ನೀರು ಸುರಿದು ಬಿಸಿಮಾಡಿ. ಹುಣಸೆ ರಸ ಸೇರಿಸಿ ಕುದಿಸಿ. ಸರಿಯಾಗಿ ಕುದಿಯುತ್ತಿದ್ದಂತೆಯೇ ಹೆಚ್ಚಿಟ್ಟುಕೊಂಡ ಬೆಂಡೆಕಾಯಿ ಸೇರಿಸಿ, ಹಸಿಮೆಣಸಿನಕಾಯಿ ಸೀಳಿ ಅದಕ್ಕೆ ಹಾಕಿ ಪಾತ್ರೆಯ ಮುಚ್ಚಲು ಮುಚ್ಚಿ ಬೇಯಲು ಬಿಡಿ. ಹತ್ತು ನಿಮಿಷಗಳ ನಂತರ, ಅರಶಿನ ಪುಡಿ, ಮೆಣಸಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ.
ಮಿಕ್ಸಿಯಲ್ಲಿ ತೆಂಗಿನ ಕಾಯಿ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ಅರೆಯಿರಿ. ಈ ಮಿಶ್ರಣವನ್ನು ಕುದಿಯುತ್ತಿರುವ ಪಾತ್ರೆಗೆ ಹಾಕಿ. ದೊಡ್ಡ ದೊಡ್ಡ ಗುಳ್ಳೆಗಳು ಬರುತ್ತಿದ್ದಂತೆಯೇ ಉಪ್ಪು ಸೇರಿಸಿ, ಮಜ್ಜಿಗೆ ಸೇರಿಸಿ ಮತ್ತೊಮ್ಮೆ ಗುಳ್ಳೆಗಳು ಬರುವ ತನಕ ಬಿಸಿ ಮಾಡಿ. ಇಂಗು, ಬೇವಿನೆಲೆಯ ಒಗ್ಗರಣೆ ನೀಡಿ. ಈ ರೀತಿ ಮಜ್ಜಿಗೆ ಹುಳಿ ಮಾಡುವುದರಿಂದ ಲೋಳೆಯಾಗದೆ ರುಚಿ ರುಚಿಯಾದ ಪದಾರ್ಥ ಸಿದ್ಧವಾಗುತ್ತದೆ.