Friday, November 21, 2025

ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಕೇಸ್: ಅಕ್ಕನ ಸಹಾಯದಿಂದ ಮುಖ್ಯ ಆರೋಪಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ಬಳಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರಿಗೆ ಆತನ ಅಕ್ಕನೇ ಸಹಾಯ ಮಾಡಿದ್ದಾರೆ.

ತನ್ನ ತಮ್ಮ ಅತ್ಯಾಚಾರ ಮಾಡಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕೆ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಮುಖ ಆರೋಪಿ ಸಫಿಕ್ ಅವರ ಅಕ್ಕ ರೋಜಿನಾ ಅವರೇ ದುರ್ಗಾಪುರದ ಆಂಡಾಲ್ ಸೇತುವೆಯ ಕೆಳಗೆ ಆತನನ್ನು ಪೊಲೀಸರಿಗೆ ಪತ್ತೆಹಚ್ಚಲು ಸಹಾಯ ಮಾಡಿದ್ದಾರೆ.

‘ಅವನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕೆಂದು ನಾನು ಬಯಸಿದ್ದೆ. ಅವನ ಕಾರಣದಿಂದಾಗಿ ನಮ್ಮ ಕುಟುಂಬವು ನಾಚಿಕೆಪಡಬಾರದು’ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಸಫಿಕ್ ಆ ಸ್ಥಳದಿಂದ ಪರಾರಿಯಾಗಲು ಬೈಕ್ ಹತ್ತಿ ಪ್ರಯತ್ನಿಸಿದ್ದಾನೆ. ಆದರೆ, ಪೊಲೀಸರು ಆತನನ್ನು ಹಿಡಿದಿದ್ದಾರೆ.

ಈ ಮೂಲಕ ದುರ್ಗಾಪುರದ ಸಾಮೂಹಿಕ ಅತ್ಯಾಚಾರದ ಎಲ್ಲ ಆರೋಪಿಗಳು ಬಂಧನದಲ್ಲಿದ್ದಾರೆ.

ಇತ್ತ ದುರ್ಗಾಪುರ ಬಾರ್ ಅಸೋಸಿಯೇಷನ್ ​​ಆರೋಪಿಗಳ ಪರವಾಗಿ ಪ್ರತಿನಿಧಿಸಲು ನಿರಾಕರಿಸಿದೆ. ಕಾನೂನು ನೆರವು ವಕೀಲ ಪೂಜಾ ಕುರ್ಮಿ ​​ಸಫಿಕ್ ಮತ್ತು ನಾಸಿರುದ್ದೀನ್ ಪರವಾಗಿ ವಕಾಲತ್‌ ಸಲ್ಲಿಸಿದರು. ಆದರೆ ಅವರು ಜಾಮೀನು ಕೋರಲಿಲ್ಲ.

error: Content is protected !!