ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದ ರಾಜಕೀಯ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿದೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಕೋಲ್ಕತ್ತಾದ ಹಲವು ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ರಾಜಕೀಯ ಸಲಹಾ ಸಂಸ್ಥೆ ಐ–ಪಿಎಸಿ (I-PAC) ಕಚೇರಿ, ಅದರ ಹಿರಿಯ ಅಧಿಕಾರಿ ಪ್ರತೀಕ್ ಜೈನ್ ನಿವಾಸ ಸೇರಿದಂತೆ ಕನಿಷ್ಠ ಐದು ಸ್ಥಳಗಳು ದಾಳಿಗೆ ಒಳಗಾಗಿವೆ.
ಇಡಿ ದಾಳಿಯ ಕುರಿತಾಗಿ ಅಧಿಕಾರಿಗಳು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ವಿಚಾರ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಐ–ಪಿಎಸಿ ಕಚೇರಿಗೆ ಆಗಮಿಸಿ, ಮಹತ್ವದ ದಾಖಲೆಗಳಿರುವ ಹಸಿರು ಬಣ್ಣದ ಕಡತವೊಂದನ್ನು ಕೈಯಲ್ಲಿ ಹಿಡಿದು ಹೊರಟಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: Rice series 9 | ಮಕ್ಕಳು ಸಖತ್ ಇಷ್ಟ ಪಡೋ ಬೀಟ್ರೂಟ್ ರೈಸ್! ನೀವೂ ಒಮ್ಮೆ ಟ್ರೈ ಮಾಡಿ
ಇಡಿ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದರು. ಪ್ರಜಾಸತ್ತಾತ್ಮಕವಾಗಿ ಸ್ಪರ್ಧಿಸಲು ವಿಫಲವಾಗಿರುವ ಬಿಜೆಪಿ, ಇಡಿ ಮೂಲಕ ಪಕ್ಷದ ದಾಖಲೆಗಳು, ಕಾರ್ಯತಂತ್ರಗಳು ಹಾಗೂ ಅಭ್ಯರ್ಥಿಗಳ ಮಾಹಿತಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಈ ದಾಳಿ ಕೇಂದ್ರ ಗೃಹ ಸಚಿವರ ಸೂಚನೆಯ ಮೇರೆಗೆ ನಡೆಯುತ್ತಿರುವ ಸಂಚು ಎಂದು ಆರೋಪಿಸಿದ ಮಮತಾ, ಇಂತಹ ಕ್ರಮಗಳನ್ನು ಪ್ರತಿಯೊಂದು ಹಂತದಲ್ಲೂ ಎದುರಿಸುವುದಾಗಿ ಸ್ಪಷ್ಟಪಡಿಸಿದರು. ಚುನಾವಣೆ ಸಮೀಪಿಸುತ್ತಿರುವ ಕಾರಣ, ಬಂಗಾಳ ರಾಜಕೀಯದಲ್ಲಿ ಈ ಬೆಳವಣಿಗೆ ಹೊಸ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

