ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ಪೊಲೀಸರ ರೌಡಿ ವಿರೋಧಿ ವಿಭಾಗವು ಬಾಂಗ್ಲಾದೇಶಿ ಮಾಡೆಲ್ ಓರ್ವಳನ್ನು ಬಂಧಿಸಿದ್ದಾರೆ.
ಆಕೆಯಿಂದ ಭಾರತೀಯ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯಂತಹ ಹಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮಾಡೆಲ್ ಅನ್ನು ಬಾಂಗ್ಲಾದೇಶದ ಬಾರಿಸಾಲ್ ಜಿಲ್ಲೆಯ ನಿವಾಸಿ ಶಾಂತಾ ಪಾಲ್ (28) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಶಾಂತಾ ಪಾಲ್ ಜಾದವ್‌ಪುರ ಪ್ರದೇಶದ ಗಾಲ್ಫ್‌ಗ್ರೀನ್ ಪೊಲೀಸ್ ಠಾಣೆ ವ್ಯಾಪ್ತಿಯ ಅವರ ಬಾಡಿಗೆ ಮನೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ತಪಾಸಣೆ ವೇಳೆ ಆಕೆಯ ಕೊಠಡಿಯಿಂದ ಅನೇಕ ಆಘಾತಕಾರಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ವಿಭಿನ್ನ ವಿಳಾಸಗಳಲ್ಲಿ ನೋಂದಾಯಿಸಲಾದ ಎರಡು ಆಧಾರ್ ಕಾರ್ಡ್‌ಗಳು, ಭಾರತೀಯ ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿ ಸೇರಿವೆ. ಇದರ ಜೊತೆಗೆ, ಆಕೆಯ ಬಳಿ ಅನೇಕ ಬಾಂಗ್ಲಾದೇಶಿ ದಾಖಲೆಗಳು ಸಹ ಪತ್ತೆಯಾಗಿವೆ.
ಬಾಂಗ್ಲಾದೇಶಿ ಪಾಸ್‌ಪೋರ್ಟ್, ಢಾಕಾದ ಮಾಧ್ಯಮಿಕ ಶಿಕ್ಷಣ ಪರೀಕ್ಷೆಯ ಪ್ರವೇಶ ಪತ್ರ ಮತ್ತು ರೀಜೆಂಟ್ ಏರ್‌ವೇಸ್ ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶಾಂತಾ ಪಾಲ್ ಕಳೆದ ವರ್ಷ ಕೋಲ್ಕತ್ತಾದಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರು ಶಾಂತಾ ಪಾಲ್ ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆಗಸ್ಟ್ 8 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದ ಕೋಲ್ಕತ್ತಾ ಪೊಲೀಸ್ ಜಂಟಿ ಆಯುಕ್ತ (ಅಪರಾಧ) ರೂಪೇಶ್ ಕುಮಾರ್ ತಿಳಿಸಿದರು,