ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದಲ್ಲಿ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ, ಬಿಜೆಪಿ ಮುಖಂಡರಾದ ವೀರಸ್ವಾಮಿ ರೆಡ್ಡಿ ಹಾಗೂ ಅವರ ಮಗ ಪ್ರಶಾಂತ್ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಹಾಗೂ ಕರ್ನಾಟಕದ ಪೊಲೀಸರು ಜಂಟಿ ತನಿಖೆ ಮುಂದುವರೆಸಿದ್ದಾರೆ.
ಈ ಕುರಿತು ನರ್ಸಿಂಹಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆಂಧ್ರಪ್ರದೇಶದ ಪೊಲೀಸರು ಮೃತರ ಮೊಬೈಲ್‌ಗಳನ್ನು ಪರಿಶೀಲಿಸಿ, ಮೃತರು ಬಾಪಟ್ಲಾ ಕಡೆಗೆ ಹೊರಡುವ ಮೊದಲು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಈ ಪೈಕಿ ಪ್ರಮುಖವಾಗಿ ಮಾರ್ವೆಲ್ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರಾದ ಮಾದವ್ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಮೇಲೆ ಶಂಕೆ ವ್ಯಕ್ತವಾಗಿದೆ.
ವೀರಸ್ವಾಮಿ ಹಾಗೂ ಪ್ರಶಾಂತ್ ರೆಡ್ಡಿ ಅವರು ಮಾದವ್ ರೆಡ್ಡಿ ಜೊತೆಗೆ ಬೆಂಗಳೂರಿನ ಕಾಡುಗೋಡಿ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿದ್ದರು. ಕೆಲ ಸಮಯದೊಳಗೆ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಂಭೀರ ಮನಸ್ತಾಪ ಉಂಟಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ವ್ಯವಹಾರಿಕ ವಿಚಾರಕ್ಕೆ ಸಂಬಂಧಿಸಿದಂತೆ, ಮೃತರ ತಂದೆ-ಮಗನ ವಿರುದ್ಧ ನರ್ಸಿಂಹಪುರಂ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆಧಾರದ ಮೇಲೆ ವೀರಸ್ವಾಮಿ ಹಾಗೂ ಪ್ರಶಾಂತ್ ರೆಡ್ಡಿಯವರನ್ನು ಆಂಧ್ರ ಪ್ರದೇಶಕ್ಕೆ ಕರೆಸಿದ್ದು, ನಂತರ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಇಬ್ಬರನ್ನು ಆಂಧ್ರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಮಾದವ್ ರೆಡ್ಡಿ ಹಾಗೂ ಅನಿಲ್ ರೆಡ್ಡಿ ಪರಾರಿಯಾಗಿದ್ದು, ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆದಿದೆ. ಈ ಪ್ರಕರಣದ ಬೆಳವಣಿಗೆಯ ಬಗ್ಗೆ ಬೆಂಗಳೂರು ಕಾಡುಗೋಡಿ ಠಾಣೆ ಪೊಲೀಸರು ಕೂಡ ನಿಕಟ ಸಹಕಾರ ನೀಡುತ್ತಿದ್ದು, ಇಬ್ಬರು ರಾಜ್ಯಗಳ ಪೊಲೀಸರು ಜಂಟಿಯಾಗಿ ತನಿಖೆ ಮುಂದುವರೆಸಿದ್ದಾರೆ.