Monday, December 15, 2025

ಹೊಸ ವರುಷದ ಸಂಭ್ರಮಕ್ಕೆ ಬೆಂಗಳೂರು ಸಜ್ಜು: ಡ್ರಗ್ಸ್ ಪಾರ್ಟಿಗಳಿಗೆ ಪೊಲೀಸರ ‘ಹೈ ಅಲರ್ಟ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ. ನಗರದೆಲ್ಲೆಡೆ ಈಗಾಗಲೇ ‘ನ್ಯೂ ಇಯರ್ ವೈಬ್’ ಶುರುವಾಗಿದ್ದು, ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿನ ಟೇಬಲ್‌ಗಳು ಬರೋಬ್ಬರಿ ಹದಿನೈದು ದಿನಗಳ ಮುಂಚೆಯೇ ಭರ್ತಿಯಾಗಿವೆ. ಈ ಸಂಭ್ರಮದ ನಡುವೆಯೇ, ಕೆಲವು ಕಡೆ ಡ್ರಗ್ಸ್ ಪಾರ್ಟಿಗಳಿಗೆ ಪ್ಲಾನ್ ನಡೆಯುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರು ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರ ಸೂಚನೆಯ ಮೇರೆಗೆ ಪೊಲೀಸರು ತಪಾಸಣೆಯನ್ನು ತೀವ್ರಗೊಳಿಸಿದ್ದು, ಅದರಲ್ಲೂ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.

ರಾತ್ರಿ ವೇಳೆ ಎಲ್ಲಾ ವಿಭಾಗಗಳ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ವಿಶೇಷ ಆಪರೇಷನ್‌ಗಳನ್ನು ಕೈಗೊಂಡಿದ್ದಾರೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದ 80 ಫೀಟ್ ರೋಡ್, ಇಂದಿರಾನಗರದ 100 ಫೀಟ್ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ತೀವ್ರ ತಪಾಸಣೆ ನಡೆಸಲಾಗಿದೆ.

ಕೆಲವು ಪ್ರದೇಶಗಳಲ್ಲಿ ಡ್ರೋನ್ ಹಾರಿಸುವ ಮೂಲಕವೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಪಬ್, ರೆಸ್ಟೋರೆಂಟ್‌ಗಳು ಮತ್ತು ಪ್ರಮುಖ ಮಾಲ್‌ಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು. ಸಿಬ್ಬಂದಿ ವಹಿಸಿರುವ ಮುಂಜಾಗ್ರತಾ ಕ್ರಮಗಳು, ಸಿಸಿಟಿವಿ ಕ್ಯಾಮೆರಾಗಳ ಕಾರ್ಯವೈಖರಿ ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಇರುವ ವ್ಯವಸ್ಥೆಗಳ ಬಗ್ಗೆ ಪೊಲೀಸರು ಮಾಹಿತಿ ಪಡೆದರು. ಹೊಸ ವರ್ಷದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಮತ್ತು ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪಬ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಪೊಲೀಸರು ಕಡಕ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಸೂಚಿಸಿವೆ. ಈ ಕಾರಣದಿಂದಾಗಿ ಬೆಂಗಳೂರು ಪೊಲೀಸರು ಹೆಚ್ಚಿನ ನಿಗಾ ಇರಿಸಿದ್ದಾರೆ.

ಈ ಮಧ್ಯೆ, ಚರ್ಚ್ ಸ್ಟ್ರೀಟ್ ಬಳಿ ಪಬ್ ಕ್ಲೋಸ್ ಮಾಡುವ ಸಮಯದಲ್ಲಿ ಮೂವರು ಏಕಾಏಕಿ ನುಗ್ಗಿ, ಅಲ್ಲಿನ ಕೆಲವು ವಸ್ತುಗಳನ್ನು ಹೊಡೆದು ಹಾಕಿ ವಿಕೃತಿ ಮೆರೆದಿದ್ದಾರೆ. ಈ ವೇಳೆ, ಇಬ್ಬರು ಪರಾರಿಯಾಗಿದ್ದು, ಒಬ್ಬನನ್ನು ಪಬ್ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!