ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಆಕರ್ಷಣೆಗಳಲ್ಲಿ ಒಂದಾದ ಮೆಟ್ರೋ ರೈಲು ಬರೋಬ್ಬರಿ 11 ವರ್ಷ ಪೂರೈಸಿ ಇಂದು 12ನೇ ವರ್ಷಕ್ಕೆ ಕಾಲಿಟ್ಟಿದೆ.
ಅಕ್ಟೋಬರ್ 20, 2011ರಂದು ಬೆಂಗಳೂರು ಮೆಟ್ರೋ ಹಳಿಗಿಳಿದಿತ್ತು. ಅಂದು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಗರದ ಎಂಜಿ ರಸ್ತೆ – ಬೈಯಪ್ಪನಹಳ್ಳಿ ನಡುವೆ ಓಡಾಟ ಆರಂಭಿಸಿದಾಗ ದಿನಕ್ಕೆ ಇದ್ದ ಪ್ರಯಾಣಿಕರ ಸರಾಸರಿ ಸಂಖ್ಯೆ 20 ಸಾವಿರ. ಅದೇ ಮೆಟ್ರೋ ರೈಲು ಇಂದು ಪ್ರತಿದಿನ ಬೆಂಗಳೂರಿನಲ್ಲಿ ಐದು ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಇನ್ನೊಂದು ಖುಷಿಯ ವಿಚಾರವೆಂದರೆ ಮೆಟ್ರೋ ಲಾಭದಲ್ಲಿ ಓಡಾಟ ನಡೆಸುತ್ತಿರುವುದು. ಅಂಕಿ ಅಂಶಗಳ ಪ್ರಕಾರ ಈ ವರ್ಷದ ಜುಲೈನಿಂದ ಲಾಭದಲ್ಲಿಯೇ ಮೆಟ್ರೋ ಓಡಾಡುತ್ತಿದೆ.
ಇದೀಗ ಮೆಟ್ರೋ 11 ವರ್ಷಗಳ ಸೇವೆ ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಾತನಾಡಿರುವ ಬಿಎಂಆರ್‌ಸಿಎಲ್ ಮುಖ್ಯಸ್ಥ ಅಂಜುಮ್ ಪರ್ವೇಜ್, ಮೆಟ್ರೋ ಸುರಕ್ಷಿತ ಮತ್ತು ಪರಿಸರ ಸ್ನೇಹಿಯಾಗಿದೆ ಅಲ್ಲದೆ ಸ್ವಚ್ಛವಾಗಿದೆ ಮತ್ತು ಉತ್ತಮವಾಗಿ ನಿರ್ವಹಿಸಲಾಗಿದೆ. ಜನರು ತಮ್ಮ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳನ್ನು ಬಿಟ್ಟು ಮೆಟ್ರೋ ಪ್ರಯಾಣವನ್ನು ಆರಿಸಿಕೊಳ್ಳಬೇಕಾಗಿದೆ. ಸಾರ್ವಜನಿಕರಿಗೆ ಪ್ರಯಾಣವನ್ನು ಅನುಕೂಲಕರವಾಗಿಸಲು ಬಿಎಂಆರ್‌ಸಿಎಲ್‌ನಿಂದ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.