ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಶಿವಾಜಿನಗರದ ಮಸೀದಿಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಶಿವಾಜಿನಗರದ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸೈಯದ್ ಮಹಮ್ಮದ್ ಅನ್ವರ್ (37) ಬಂಧಿತ ಆರೋಪಿ.
ಜುಲೈ 4ರಂದು ಬಂಗಳೂರಿಗೆ ಬಂದಿದ್ದ ಅನ್ವರ್ ಶಿವಾಜಿನಗರದ ರೆಸೆಲ್ ಮಾರ್ಕೆಟ್ ಹಿಂದಿರುವ ಆಜಾಂ ಮಸೀದಿಗೆ ಬಂದಿದ್ದನು. ರಾತ್ರಿ ಉಳಿದುಕೊಳ್ಳಲು ಮುಂದಾಗಿದ್ದ. ಆದರೆ ಮಸೀದಿ ಸಿಬ್ಬಂದಿ ಆತನಿಗೆ ಉಳಿದುಕೊಳ್ಳಲು ಅವಕಾಶ ನೀಡಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಅನ್ವರ್ ಮಸೀದಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಕಂಟ್ರೋಲ್ ನಂಬರ್ 112ಕ್ಕೆ ಕರೆ ಮಾಡಿದ್ದನು. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಇದೊಂದು ಹುಸಿ ಬಾಂಬ್ ಕರೆಯೆಂದು ತಿಳಿದುಬಂದಿದೆ. ಬಳಿಕ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ಬಂಧಿಸಲು ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿದ್ದರು. ಆಂಧ್ರಕ್ಕೆ ತೆರಳಿದ್ದ ಆರೋಪಿ ಸೈಯದ್ನನ್ನು ಶಿವಾಜಿನಗರ ಪೊಲೀಸರು ಕರ್ನೂಲ್ನಿಂದ ತೆಲಂಗಾಣದ ಮೆಹಬೂಬ್ನಗರಕ್ಕೆ ತೆರಳಿದ್ದಾಗ ಬಂಧಿಸಿದ್ದಾರೆ.