ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹೊಸದಿಗಂತ ವರದಿ, ಮಂಡ್ಯ :

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿಲ್ಲ. ಕೆಲವೊಂದು ಸೌಲಭ್ಯಗಳ ಕೊರತೆ ಇದೆ. ಇನ್ನಷ್ಟು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ನಗರದ ಹೊರವಲಯದ ಶಶಿಕಿರಣ ಕನ್ವೆನ್‌ನ್ಷನ್ ಹಾಲ್ ಬಳಿ ಆಳವಡಿಸಿರುವ ಸ್ಪೀಡ್ ಡಿಟೆಕ್ಟರ್ ಡೆಮೋ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿಲ್ಲ. ಆತುರಾತುರವಾಗಿ ಕೆಲಸ ಮಾಡಿದ್ದಾರೆ. ಸರ್ವೀಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ. ಬೈಪಾಸ್ ರಸ್ತೆಗಳನ್ನು ಬಲವರ್ಧನೆಗೊಳಿಸಬೇಕಿತ್ತು. ಇನ್ನು ಹಲವು ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಎಡವಿದ್ದಾರೆ ಎಂದು ತಿಳಿಸಿದರು.
ಹೆದ್ದಾರಿಯಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದವರೆಗೆ ಸರ್ವೀಸ್ ರಸ್ತೆ ಅಭಿವೃದ್ಧಿಪಡಿಸುವುದು, ಬೈಪಾಸ್ ರಸ್ತೆಗಳನ್ನು ಬಲವರ್ಧನೆಗೊಳಿಸುವುದಕ್ಕಾಗಿ 151 ಕೋಟಿ ರು.ಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಆಗಸ್ಟ್‌-ನವೆಂಬರ್ ವೇಳೆಗೆ ಅನುಮತಿ ದೊರಕಲಿದ್ದು, ನಂತರ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು.
ಶೀಘ್ರ ನಿತಿನ್ ಗಡ್ಕರಿ ಭೇಟಿ
ಟೋಲ್ ಸಂಗ್ರಹಿಸುವವರು ನಾವಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಂಗ್ರಹ ಮಾಡುತ್ತಾರೆ. ಹೆದ್ದಾರಿ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ದೆಹಲಿಗೆ ತೆರಳಲಿದ್ದೇನೆ. ಅಲ್ಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!