ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಆಯೋಜನೆ ಮಾಡಿದ್ದು, ಬೆಂಗಳೂರಿಗರಿಗೆ ಕಂಬಳ ಕ್ರೀಡೆ ಸಿಕ್ಕಾಪಟ್ಟೆ ಮನರಂಜನೆ ನೀಡಿದೆ.
ವೀಕೆಂಡ್‌ನಲ್ಲಿ ಜನ ಕಂಬಳ ವೀಕ್ಷಣೆಗೆ ಮುಗಿಬಿದ್ದಿದ್ದು, ಮೊದಲ ಬಾರಿ ಕಂಬಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅರಮನೆ ಮೈದಾನ ಅಕ್ಷರಶಃ ತುಳುನಾಡಿನ ವೈಭವಕ್ಕೆ ಹಿಡಿದ ಕನ್ನಡಿಯಂತೆ ಕಂಡಿದ್ದು, ಬೆಂಗಳೂರಿನ ಜನರಿಗೆ ಈ ವಿಭಿನ್ನ ಅನುಭವ ಖುಷಿಕೊಟ್ಟಿದೆ.
ವಿಭಿನ್ನ ಗೋಪುರ, ಕಂಬಳ ಕೋಣದ ಪ್ರತಿಕೃತಿ, ಎತ್ತಿನ ಬಂಡಿ, ದೇಗುಲ, ನಾಗನ ಕಟ್ಟೆ, ವಿಭಿನ್ನ ಆಹಾರ ರುಚಿ ಅದ್ಭುತವಾಗಿತ್ತು ಎನ್ನುವುದು ಜನರ ಅಭಿಪ್ರಾಯವಾಗಿದೆ.
ತಡರಾತ್ರಿ 12 ಗಂಟೆ ಬಳಿಕವೂ ಕೋಣಗಳ ಓಟದ ಸ್ಪರ್ಧೆ ನಡೆದಿದ್ದು, ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಇಂದು ಭಾನುವಾರ ಆಗಿರುವ ಕಾರಣ ಇನ್ನೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಕಂಬಳ ಆಯೋಜಕರು ಹೇಳಿದ್ದಾರೆ.