ಹೊಸದಿಂಗತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದ್ದಾರೆ. ಸಿಎಂ ಅವರಿಂದ ಸ್ಮಾರ್ಟ್ ಕಾರ್ಡ್ ಪಡೆಯುವ ಮೊದಲ ಮಹಿಳೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ.
ಕಾಂಗ್ರೆಸ್‌ನ ಮೊದಲ ಗ್ಯಾರಂಟಿಯಾದ ಶಕ್ತಿ ಯೋಜನೆಗೆ ಇಂದು ಚಾಲನೆ ನೀಡಲಾಯಿತು. ಈ ವೇಳೆ ಅಧಿಕೃತವಾಗಿ ಐವರು ಮಹಿಳೆಯರಿಗೆ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ನೀಡಲಾಯಿತು. ಬೆಂಗಳೂರಿನ ಆರ್ ಟಿ ನಗರದ ನಿವಾಸಿ ಸುಮಿತ್ರಾ ಎಚ್. ಆರ್ ಅವರು ಮೊದಲ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 23 ದಿನಗಳಲ್ಲಿಯೇ ಮೊದಲ ಭರವಸೆ ಜಾರಿಯಾಗಿದೆ.
ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಮೊದಲ ಟಿಕೆಟ್ ಪಡೆದು ಗಮನ ಸೆಳೆದರು. ಟಿಕೆಟ್ ಪ್ರದರ್ಶಿಸಿ ಖುಷಿ ವ್ಯಕ್ತಪಡಿಸಿದರು. ನಂತರ ಎರಡನೇ ಟಿಕೆಟ್‌ನ್ನು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಪಡೆದುಕೊಂಡರು.
ಮೊದಲ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಮಾತನಾಡಿ, ನಾನು ಬೆಂಗಳೂರಿನ ನಿವಾಸಿ ಆಗಿದ್ದೇನೆ. ಸ್ಮಾರ್ಟ್ ಕಾರ್ಡ್ ಪಡೆದ ಮೊದಲ ಮಹಿಳೆ ಅನ್ನೋದಕ್ಕೆ ಹೆಮ್ಮೆ ಆಗ್ತಿದೆ. ಸ್ಮಾರ್ಟ್ ಕಾರ್ಡ್ ಪಡೆಯಲು ಆಧಾರ್ ನೀಡಿದ್ದೆನು. ಮುಂದಿನ ದಿನಗಳಲ್ಲಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.