ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಕಾಲ್ತುಳಿತ ಕರ್ನಾಟಕ ಇತಿಹಾಸದ ಕರಾಳ ಅಧ್ಯಾಯ ಎಂದು ಬಿ.ವೈ. ವಿಜಯೇಂದ್ರ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದಿದ್ದಾರೆ.
ಕಳೆದ ಜೂನ್ 4 ಕರ್ನಾಟಕದ ಇತಿಹಾಸದಲ್ಲಿ ಕರಾಳ ಅಧ್ಯಾಯದ ದಿನ. ಕ್ರಿಕೆಟ್ ಅಭಿಮಾನದ ಲಾಭಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ನೀವು ಮತ್ತು ನಿಮ್ಮ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ.
ಜಮಾವಣೆಗೊಂಡಿದ್ದ ಸಾವಿರಾರು ಜನರು ನೋವು-ಸಂಕಷ್ಟವನ್ನು ಅನುಭವಿಸಿದ್ದಾರೆ. ಕುಟುಂಬ ಬೆಳಗಬೇಕಿದ್ದ. ಉಜ್ವಲ ಭವಿಷ್ಯದ ಕನಸು ಕಂಡಿದ್ದ 11 ಯುವ ಜನರ ಸಾವು ಆ ಕುಟುಂಬಗಳ ನೆಮ್ಮದಿಯನ್ನು ಕಿತ್ತುಕೊಂಡು ಹೆತ್ತವರು ನಿತ್ಯ ಕಣ್ಣೀರಿಡುವಂತಾಗಿದೆ. ಇಡೀ ಘಟನೆಯಿಂದಾಗಿ ಈ ಕ್ಷಣಕ್ಕೂ ಇಡೀ ರಾಜ್ಯ ಮಮ್ಮಲ ಮರುಗುತ್ತಿದೆ ಎಂದಿದ್ದಾರೆ.
ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಘಟನೆ, ಕರ್ನಾಟಕದ ಘನತೆಗೆ ಕಪ್ಪು ಮಸಿ ಬಳಿದಿದೆ. ನಮ್ಮ ರಾಜ್ಯ ಅಸುರಕ್ಷತೆಯ ತಾಣ ಎಂಬ ಸಂದೇಶ ರವಾನೆಯಾಗಿದೆ. ಇಷ್ಟಾಗಿಯೂ ಸರ್ಕಾರಕ್ಕೂ ಈ ಘಟನೆಗೂ ಸಂಬಂಧವಿಲ್ಲ. ಸರ್ಕಾರ ಈ ಘಟನೆಯ ಜವಾರಿಯನ್ನು ಹೊರಲಾಗದು ಎಂಬ ನಿಮ್ಮ ಹೇಳಿಕೆ ಪಲಾಯನವಾದ ಹಾಗೂ ನಿರ್ಲಜ್ಜತನದ ಹೊಣೆಗೇಡಿತನವನ್ನು ಪ್ರತಿಬಿಂಬಿಸುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನದ ನಿಮ್ಮ ನಡೆ ಪರಂಪರೆಯ ಕರ್ನಾಟಕದ ನೈತಿಕ ರಾಜಕಾರಣವನ್ನು ಅವಮಾನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.