ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮತ್ತು ಮುಂಬೈ ನಡುವೆ ವೇಗವಾದ ರೈಲು ಸೇವೆಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಸಂತಸದ ಸುದ್ದಿ ಸಿಕ್ಕಿದೆ. ಈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಕೇಂದ್ರ ರೈಲ್ವೆ ಗ್ರೀನ್ ಸಿಗ್ನಲ್ ನೀಡಿದ್ದು, ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬೆಳವಣಿಗೆ ರಾಜ್ಯದ ಪ್ರಯಾಣಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಅವರು ಈ ಸೇವೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರು. ವಿಶೇಷವಾಗಿ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣವನ್ನು ಆರಂಭ ಮತ್ತು ಅಂತ್ಯ ಬಿಂದುವಾಗಿರಿಸಿ ಸ್ಲೀಪರ್ ರೈಲು ಆರಂಭಿಸಬೇಕು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ:
ಕಳೆದ ಡಿಸೆಂಬರ್‌ನಲ್ಲಿ ನಡೆದ ನೈಋತ್ಯ ರೈಲ್ವೆಯ ಸ್ಥಾಯಿ ಸಮಿತಿ ಸಭೆಯಲ್ಲೂ ಈ ಬೇಡಿಕೆ ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಬೆಂಗಳೂರು-ಮುಂಬೈ ನಡುವಿನ ಈಗಿನ ರೈಲು ಪ್ರಯಾಣಕ್ಕೆ ಸಾಮಾನ್ಯವಾಗಿ 24ರಿಂದ 30 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಬಸ್ ಸೇವೆಗಳು 16ರಿಂದ 18 ಗಂಟೆಗಳಲ್ಲಿ ಗಮ್ಯ ತಲುಪುತ್ತಿರುವುದರಿಂದ ವೇಗದ ರೈಲು ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಹೊಸ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾದರೆ ಈ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ. ಮುಂಬೈ ದೇಶದ ಆರ್ಥಿಕ ರಾಜಧಾನಿ ಮತ್ತು ಬೆಂಗಳೂರು ತಂತ್ರಜ್ಞಾನ ನಗರವಾಗಿರುವ ಹಿನ್ನೆಲೆ, ಈ ಸಂಪರ್ಕಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ.
ರೈಲು ಆರಂಭದ ನಿಖರ ದಿನಾಂಕ ಮತ್ತು ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.



