ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀಕೆಂಡ್ ಜೋಶ್‌ನಲ್ಲಿ ಹೊರಬರುತ್ತಿರುವ ಬೆಂಗಳೂರು ನಿವಾಸಿಗಳು ಇವತ್ತಿಗೆ ಕೊಂಚ ಎಚ್ಚರಿಕೆಯಿಂದ ಇರಿ. ಇಂದು ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲವೊಂದು ಮುಖ್ಯ ರಸ್ತೆಗಳು ಬಂದ್ ಆಗಿದ್ದು, ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆಗಳು ಜಾರಿಗೊಳ್ಳಲಿವೆ. ನಗರ ಸಂಚಾರ ಪೊಲೀಸ್ ಇಲಾಖೆ ಈ ಕುರಿತು ಪೂರ್ಣ ಮಾಹಿತಿಯನ್ನು ನೀಡಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಿದೆ.
ಮೊಹರಂ ಪ್ರಯುಕ್ತ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5.30 ರವರೆಗೆ ನಗರದ ಕೆಲ ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ ಮೂಲಕ ಹೊಸೂರು ರಸ್ತೆ ಶೂಲೆ ಜಂಕ್ಷನ್ ವರೆಗೆ ಸಂಚಾರ ನಿಷೇಧಿಸಲಾಗಿದ್ದು, ಈ ಭಾಗಗಳಲ್ಲಿ ವಾಹನಗಳ ಚಲನವಲನಕ್ಕೆ ನಿರ್ಬಂಧವಿದೆ.
ಪರ್ಯಾಯ ಮಾರ್ಗದ ಮಾಹಿತಿ
ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ ಭಾಗದಲ್ಲಿ ರಸ್ತೆ ಬಂದ್ ಇರುವ ಹಿನ್ನೆಲೆಯಲ್ಲಿ ವಾಹನ ಸವಾರರು ಹಳೇ ಮದ್ರಾಸ್ ರಸ್ತೆ, ವುಡ್ ಸ್ಟ್ರೀಟ್, ಟೇಟ್ ಲೇನ್, ರಿಚ್ಮಂಡ್ ಜಂಕ್ಷನ್, ಶಾಂತಿನಗರ ಜಂಕ್ಷನ್ ಹಾಗೂ ನಂಜಪ್ಪ ಸರ್ಕಲ್ ಮಾರ್ಗವಾಗಿ ಹೊಸೂರು ರಸ್ತೆಗೆ ಹೋಗಬಹುದು. ಈ ಮಾರ್ಗಗಳಲ್ಲಿ ಸಂಚಾರ ನಿರಾತಂಕವಾಗಿರಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಆಡುಗೋಡಿ ಕಡೆಗೆ ಬರುವ ವಾಹನಗಳು ಆನೇಪಾಳ್ಯ ಜಂಕ್ಷನ್, ಸಿಮೆಟ್ರಿ ಕ್ರಾಸ್, ಬರ್ಲಿ ಸ್ಟ್ರೀಟ್, ಲಾಂಗ್‌ಫೋರ್ಡ್ ರಸ್ತೆ ಹಾಗೂ ನಂಜಪ್ಪ ಸರ್ಕಲ್ ಮೂಲಕವೇ ಸಂಚರಿಸಬೇಕು. ಭಾರೀ ವಾಹನಗಳು ಮೈಕೊ ಜಂಕ್ಷನ್, ವಿಲ್ಸನ್ ಗಾರ್ಡನ್, ಸಿದ್ದಯ್ಯ ರಸ್ತೆ ಮಾರ್ಗವಾಗಿ ಸಾಗಿಸಬಹುದು.
ಇದರ ಜೊತೆಗೆ, ಹೆಣ್ಣೂರು ಜಂಕ್ಷನ್ ಹಾಗೂ ಕಾಲಾಮಂದಿರ ಬಳಿಯಲ್ಲಿ ಬಿಎಂಆರ್‌ಸಿಎಲ್ ಕಾಮಗಾರಿಗಳ ಕಾರಣ ಸಂಚಾರ ನಿಧಾನಗತಿಯಲ್ಲಿ ಸಾಗುವ ಸಂಭವವಿದೆ. ಇದೇ ರೀತಿ, ಮೇಡಹಳ್ಳಿ ಜಂಕ್ಷನ್ ಹತ್ತಿರ ಹಬ್ಬದ ಕಾರಣದಿಂದ ಹೊಸಕೋಟೆ ಭಾಗದಲ್ಲಿ ದಟ್ಟ ಸಂಚಾರ ನಿರೀಕ್ಷೆಯಿದೆ.