Saturday, December 20, 2025

ಬೆಂಗಳೂರಿಗರೇ ಎಚ್ಚರ‼️ಹದಗೆಟ್ಟ ಗಾಳಿ + ಚಳಿ = ಆರೋಗ್ಯಕ್ಕೆ ಕುತ್ತು! ಉಸಿರಾಡುವ ಗಾಳಿಯೇ ಈಗ ವಿಷಕಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯಾನನಗರಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯದ ಮಟ್ಟ ಅಪಾಯಕಾರಿ ಹಂತಕ್ಕೆ ತಲುಪಿದ್ದು, ನಗರದ ನಿವಾಸಿಗಳು ಶುದ್ಧ ಗಾಳಿಗಾಗಿ ಹಾತೊರೆಯುವಂತಾಗಿದೆ. ಕಳೆದ ಕೆಲವು ದಿನಗಳಿಂದ ಏರ್ ಕ್ವಾಲಿಟಿ ಇಂಡೆಕ್ಸ್ 170 ರಿಂದ 200ರ ಆಸುಪಾಸಿನಲ್ಲಿದ್ದು, ಇಂದು ಮಾಲಿನ್ಯದ ಪ್ರಮಾಣ 196ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಪ್ರಸ್ತುತ ಪರಿಸ್ಥಿತಿ ದೇಶದ ಅತ್ಯಂತ ಕಲುಷಿತ ನಗರವಾದ ದೆಹಲಿಯನ್ನು ನೆನಪಿಸುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಗಂಭೀರ ಆರೋಗ್ಯ ತುರ್ತುಸ್ಥಿತಿ ಎದುರಾಗಬಹುದು ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶೀತಗಾಳಿಯ ನಡುವೆಯೇ ವಾಯು ಮಾಲಿನ್ಯವು ಸೇರಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಗಾಳಿಯಲ್ಲಿನ ಕಣಗಳು ಇಂದು 121ಕ್ಕೆ ಏರಿದ್ದು, ಇದು ಶ್ವಾಸಕೋಶದ ಆಳಕ್ಕೆ ಇಳಿದು ಹಾನಿ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಲ್ಲಿ ಉಸಿರಾಟದ ತೊಂದರೆ, ಅಸ್ತಮಾ ಹಾಗೂ ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಅಷ್ಟೇ ಅಲ್ಲದೆ, ಇದು ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

AQI ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2025ನೇ ಸಾಲು ಬೆಂಗಳೂರಿಗೆ ಅತ್ಯಂತ ಕಲುಷಿತ ವರ್ಷವಾಗಿ ಪರಿಣಮಿಸಿದೆ. ಈ ವರ್ಷ ಸುಮಾರು 90ಕ್ಕೂ ಹೆಚ್ಚು ದಿನಗಳ ಕಾಲ ನಗರದ ಗಾಳಿಯು ‘ಅನಾರೋಗ್ಯಕರ’ ಹಂತದಲ್ಲಿತ್ತು. ಕೇವಲ 2 ದಿನಗಳು ಮಾತ್ರ ‘ಉತ್ತಮ’ ಗಾಳಿಯ ಗುಣಮಟ್ಟ ದಾಖಲಾಗಿದ್ದು, 253 ದಿನಗಳು ಸಾಧಾರಣ ಸ್ಥಿತಿಯಲ್ಲಿದ್ದವು.

ತಜ್ಞರ ಕಿವಿಮಾತು:

ಗಾಳಿಯ ಗುಣಮಟ್ಟ 150 ದಾಟಿದಾಗ ಆರೋಗ್ಯವಂತರಿಗೂ ತೊಂದರೆಯಾಗಬಹುದು. ಆದ್ದರಿಂದ ಅನಗತ್ಯವಾಗಿ ಮನೆಯಿಂದ ಹೊರಹೋಗುವುದನ್ನು ತಪ್ಪಿಸಿ.

ಮನೆಯೊಳಗೆ ಏರ್ ಪ್ಯೂರಿಫೈಯರ್ ಬಳಸುವುದು ಉತ್ತಮ.

ಬೆಳಗಿನ ಜಾವ ಅಥವಾ ಸಂಜೆ ವೇಳೆ ವಾಕಿಂಗ್ ಹೋಗುವವರು ಮಾಲಿನ್ಯದ ಮಟ್ಟ ಗಮನಿಸಿ ಹೊರಬನ್ನಿ.

ಉಸಿರಾಟದ ಸಮಸ್ಯೆ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ.

error: Content is protected !!