ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಂಡರ್ ಕೊರತೆಯ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ಬಯೋಗ್ಯಾಸ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಸಿ ತ್ಯಾಜ್ಯವನ್ನು ಬಳಸಿಕೊಂಡು ಅನಿಲ ಉತ್ಪಾದಿಸುವ ಯೋಜನೆಯನ್ನು ವಿಸ್ತರಿಸುವ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೋರಮಂಗಲದಲ್ಲಿರುವ ಬಯೋಗ್ಯಾಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟಕ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಉತ್ಪಾದನೆಯಾಗುವ ಅನಿಲವನ್ನು ಹೇಗೆ ಬಳಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈಗಾಗಲೇ ಕೋರಮಂಗಲ ಘಟಕದಿಂದ ಹೋಟೆಲ್‌ಗಳು ಸೇರಿದಂತೆ ವಾಣಿಜ್ಯ ಬಳಕೆಗೆ ಗ್ಯಾಸ್ ಪೂರೈಕೆ ಮಾಡಲಾಗುತ್ತಿದೆ.
ಇದನ್ನೂ ಓದಿ:
ಪಾಲಿಕೆಯ ಮಾಹಿತಿ ಪ್ರಕಾರ ನಗರದಲ್ಲಿ ಒಟ್ಟು 12 ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಆರು ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ ಘಟಕಗಳಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ಪ್ರತಿ ಘಟಕದಲ್ಲಿ ದಿನಕ್ಕೆ ಸುಮಾರು 5 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಬಯೋಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ.
ಒಂದು ಟನ್ ತ್ಯಾಜ್ಯದಿಂದ ಸುಮಾರು 30 ರಿಂದ 50 ಕೆ.ಜಿ ಅನಿಲ ಉತ್ಪಾದಿಸುವ ಸಾಮರ್ಥ್ಯವಿದ್ದು, ಪ್ರತಿ ಘಟಕದಲ್ಲಿ ದಿನಕ್ಕೆ ಸುಮಾರು 200 ಕೆ.ಜಿ ಬಯೋಗ್ಯಾಸ್ ದೊರೆಯುತ್ತದೆ. ಈ ಅನಿಲವನ್ನು ಹೋಟೆಲ್‌ಗಳಲ್ಲಿ ಅಡುಗೆಗೆ ಬಳಸುವ ಜೊತೆಗೆ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಲ್ಲಿ ಬೆಳಕು ವ್ಯವಸ್ಥೆಗೂ ಬಳಸಲಾಗುತ್ತಿದೆ.



