ಹಿಂದು ಸಂಘಟನೆಗಳ ನಡುವೆ ಇನ್ನಷ್ಟು ಉತ್ತಮ ಸಮನ್ವಯ ಇಂದಿನ ಅಗತ್ಯ: ಬ್ಯಾಂಕಾಕ್ ವಿಶ್ವಹಿಂದು ಅಧಿವೇಶನದಲ್ಲಿ ದತ್ತಾಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕ್ಕೆ ಶಾಂತಿ , ನೆಮ್ಮದಿಯನ್ನು ಕಲ್ಪಿಸಲು ಮತ್ತು ಹಿಂದು ಸಮುದಾಯದ ಧ್ವನಿಯನ್ನು ಪರಿಣಾಮಕಾರಿಯಾಗಿಸಲು ವಿಶ್ವದೆಲ್ಲೆಡೆ ಇರುವ ಹಿಂದು ಸಂಘಟನೆಗಳ ನಡುವೆ ಬಲಿಷ್ಠವಾದ ಮತ್ತು ಇನ್ನಷ್ಟು ಉತ್ತಮ ಸಮನ್ವಯ ಏರ್ಪಡುವಂತಾಗಬೇಕು ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಒತ್ತಿ ಹೇಳಿದ್ದಾರೆ.

ಅವರು ಥೈಲ್ಯಾಂಡಿನ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವಹಿಂದು ಅವೇಶನ(ಡಬ್ಲ್ಯೂಎಚ್‌ಸಿ)ದಲ್ಲಿ ಶುಕ್ರವಾರ ಸಂಜೆ ಮಾತನಾಡಿ, ಇಂದು ಹಿಂದು ಸಂಘಟನೆಗಳಲ್ಲಿನ ವಿವಿಧತೆ ಅನೇಕ ದೇಶಗಳಲ್ಲಿ ಹಿಂದು ಸಮುದಾಯದಲ್ಲಿ ಅನೈಕ್ಯತೆಗೆ ಕಾರಣವಾಗಿದೆ. ಇದು ಬದಲಾಗಿ ಹಿಂದು ಸಂಘಟನೆಗಳಲ್ಲಿ ಹೆಚ್ಚಿನ ಸಮನ್ವಯ ಏರ್ಪಟ್ಟಲ್ಲಿ ಹಿಂದು ಸಮಾಜ ಎದುರಿಸುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.

ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಭಾಷೆ, ವರ್ಗ, ಜಾತಿ, ಉಪಜಾತಿಗಳು, ಗುರುಗಳ ನೆಲೆಯಲ್ಲಿ ಅನೇಕ ಅಸೋಸಿಯೇಶನ್‌ಗಳು, ಸಂಘ ಸಂಸ್ಥೆಗಳು, ವೇದಿಕೆಗಳನ್ನು ರಚಿಸಿಕೊಳ್ಳಲಾಗಿದೆ.ಪ್ರತಿ ಸಂಘಸಂಸ್ಥೆಗಳು ತಮ್ಮ ತಮ್ಮ ನೆಲೆಯಲ್ಲಿ ತಮ್ಮ ಕೆಲಸಗಳನ್ನು ಸಮರ್ಥವಾಗಿಯೇ ಮಾಡುತ್ತಿವೆ.ಆದರೆ ಈ ಸಂಘಟನೆಗಳಲ್ಲಿನ ವ್ಯತ್ಯಾಸಗಳಲ್ಲಿ ಹಿಂದು ಕಳೆದುಹೋಗುತ್ತಿದ್ದಾನೆ/ಳೆ.ತಮ್ಮ ಸೀಮಿತ ಉದ್ದೇಶಗಳನ್ನು ಸಾಸಿಕೊಳ್ಳುವ ವೇಳೆ ವಿಶಾಲ ಹಿಂದು ಸಮಾಜ ಮರೆತುಹೋಗುವಂತಾಗಬಾರದು.ಅನೇಕ ಬಾರಿ ಹಿಂದು ಸಮಾಜದಲ್ಲಿನ ಈ ವಿವಿಧತೆಗಳು ಅನೈಕ್ಯತೆಗೆ ಕಾರಣವಾಗುತ್ತಿರುವ ವಿಷಾದನೀಯ ವಿದ್ಯಮಾನಗಳನ್ನು ನೋಡುತ್ತೇವೆ ಎಂದು ಅವರು ಕಳವಳದಿಂದ ಹೇಳಿದರು.

ಈ ಎಲ್ಲ ಸಂಘಟನೆಗಳ ನಡುವೆ ಉತ್ತಮವಾದ ಸಮನ್ವಯ, ಬಾಂಧವ್ಯ ರೂಪುಗೊಂಡದ್ದೇ ಆದರೆ ಎಲ್ಲ ವಿರೋಧಾಭಾಸಗಳನ್ನು , ಭಿನ್ನಾಭಿಪ್ರಾಯಗಳನ್ನು ಅಳಿಸಿಹಾಕಿ ಹಿಂದು ಸಮಾಜದ ಧ್ವನಿಯನ್ನು ಸಮರ್ಥ ರೀತಿಯಲ್ಲಿ ಎತ್ತಲು ಸಾಧ್ಯ . ಇದು ಇಂದು ಆಗಬೇಕಾದ ತುರ್ತು ಕಾರ್ಯ ಎಂದು ಅವರು ಕಿವಿಮಾತು ಹೇಳಿದರು.

ಹಿಂದು ಸಂಘಸಂಸ್ಥೆಗಳು ತಮ್ಮ ನಡುವೆ ಮಾಹಿತಿಗಳು, ಸಮನ್ವಯ , ಸಹಕಾರ, ಸಹಭಾಗಿತವನ್ನು ಹಂಚಿಕೊಂಡಲ್ಲಿ ಗೊಂದಲಗಳು ಉಂಟಾಗಲು ಸಾಧ್ಯವಿಲ್ಲ. ಇದರಿಂದ ಹಿಂದುಗಳ ಮತಾಂತರವನ್ನು ತಡೆಯಲು ಸಾಧ್ಯವಾಗಲಿದೆ. ಹಾಗೆಯೇ ಹಿಂದು ಸಮಾಜದ ಮಾನವ ಹಕ್ಕುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ತಡೆ ಬೀಳಲಿದೆ. ಯುರೋಪ್ ಸೇರಿದಂತೆ ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ ಹಿಂದು ಭಾಷೆ, ಧರ್ಮ, ಸಂಸ್ಕೃತಿಗಳ ಅಧ್ಯಯನ ಪೀಠಗಳ ಕೊರತೆ ನಿವಾರಣೆಯಾಗಲಿದ್ದು, ಸವಾಲುಗಳಿಂದ ಹಿಂದು ಸಮಾಜದ ವಿಶಾಲ ಹಿತವನ್ನು ರಕ್ಷಿಸುತ್ತದೆ ಎಂದು ಅವರು ವಿವರಿಸಿದರು.

ವಿಶ್ವ ಹಿಂದು ಫೌಂಡೇಶನ್‌ನ ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದರ ಶಂಖನಾದದೊಂದಿಗೆ ಆರಂಭಗೊಂಡ ಮೂರು ದಿನಗಳ ಈ ಚತುರ್ವಾರ್ಷಿಕ ಸಮ್ಮೇಳನದಲ್ಲಿ ವಿಶ್ವದೆಲ್ಲೆಡೆಯ 60 ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಹಿಂದುಧರ್ಮ ಒಂದು ಸಾರ್ವಕಾಲಿಕವಾದ ಧರ್ಮವಾಗಿದ್ದು, ಎಲ್ಲ ದಬ್ಬಾಳಿಕೆ, ತಾರತಮ್ಯ ಮತ್ತು ಸವಾಲುಗಳ ಎದುರಿಸಿ ಪುನರುತ್ಥಾನಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಹಿಂದು ಪದವ್ಯಾಪ್ತಿಯಲ್ಲಿ ಬರುವ ಎಲ್ಲವನ್ನೂ ಹೆಚ್ಚು ನಿಖರವಾಗಿ ಧ್ವನಿಸುವ ಹಿಂದುತ್ವ ಪದವನ್ನು ಈ ಸಮ್ಮೇಳನದಲ್ಲಿ ಅಂಗೀಕರಿಸಲಾಗಿದೆ.

ಇದಕ್ಕೂ ಮುನ್ನ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ್ದರು. ಇಂದು ಭೌತಿಕವಾದ, ಕಮ್ಯುನಿಸಂ, ಬಂಡವಾಳಶಾಹಿ, ಸೆಮೆಟಿಕ್ ಮತಚಿಂತನೆಗಳ ಪ್ರಯೋಗಗಳಿಂದಾಗಿ ನಲುಗಿ ಹೋಗಿರುವ ವಿಶ್ವಕ್ಕೆ ಶಾಂತಿ, ನೆಮ್ಮದಿಯ ಹಾದಿಯನ್ನು ತೋರಿಸಿಕೊಡಲು ಹಿಂದು ಆಧಾರಿತವಾದ ಭಾರತದಿಂದ ಮಾತ್ರ ಸಾಧ್ಯ.ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಇರುವ ಹಿಂದುಗಳು ಒಂದಾಗಬೇಕೆಂದು ಕರೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!