March 19, 2026
Thursday, March 19, 2026
spot_img

ಲಂಡನ್ ಬೀದಿಯಲ್ಲಿ ಪಾನ್ ಉಗುಳಿದ್ರೆ ಹುಷಾರ್: ಅನಿವಾಸಿ ಭಾರತೀಯರಿಗೆ ಬಿದ್ದಿತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಡನ್ ರಸ್ತೆಗಳಲ್ಲಿ ಪಾನ್ ಉಗುಳಿ ಗಲೀಜು ಮಾಡಿರುವುದು ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ಭಾರೀ ದುಬಾರಿಯಾಗಿ ಪರಿಣಮಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತು ತೋರಿದ ಇವರಿಗೆ ಲಂಡನ್ ನ್ಯಾಯಾಲಯವು ಬರೋಬ್ಬರಿ 1.7 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಎಡ್ಗ್‌ವೇರ್ ನಿವಾಸಿ ಅಕ್ಷಿತ್‌ಕುಮಾರ್ ಭದ್ರೆ ಪಟೇಲ್ (31) ಅವರು 2025ರ ಜೂನ್ 11ರಂದು ಕಿಂಗ್ಸ್‌ಬರಿಯ ರಸ್ತೆಯಲ್ಲಿ ಪಾನ್ ಉಗುಳಿದ್ದರು. ಆರಂಭದಲ್ಲಿ ಅಧಿಕಾರಿಗಳು ಇವರಿಗೆ 100 ಯುರೋ ದಂಡ ವಿಧಿಸಿದ್ದರು. ಆದರೆ ಅದನ್ನು ಪಾವತಿಸದ ಅಕ್ಷಿತ್, ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಗೂ ಹಾಜರಾಗದ ಕಾರಣ, ನ್ಯಾಯಾಲಯವು ಈಗ ಅವರಿಗೆ ಭಾರಿ ಮೊತ್ತದ ದಂಡ ವಿಧಿಸಿದೆ.

ರುಯಿಸ್ಲಿಪ್ ನಿವಾಸಿ ಹಿತೇಶ್ ಪಟೇಲ್ (32) ಅವರು ಜೂನ್ 12ರಂದು ವೆಂಬ್ಲಿ ಹಿಲ್ ರಸ್ತೆಯಲ್ಲಿ ಪಾನ್ ಉಗುಳಿದ್ದರು. ಇವರೂ ಸಹ ವಿಚಾರಣೆಗೆ ಗೈರುಹಾಜರಾಗಿದ್ದರಿಂದ, ಅವರ ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಿದ ನ್ಯಾಯಾಲಯವು ₹1.7 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಪಾನ್ ಉಗುಳುವುದರಿಂದ ಉಂಟಾಗುವ ಕಲೆಗಳನ್ನು ಸ್ವಚ್ಛಗೊಳಿಸುವುದು ಸ್ಥಳೀಯ ಕೌನ್ಸಿಲ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪ್ರತಿ ವರ್ಷ ಈ ಕಲೆಗಳನ್ನು ಅಳಿಸಲು ಬರೋಬ್ಬರಿ 30,000 ಯುರೋಗಳಿಗೂ (ಸುಮಾರು 32 ಲಕ್ಷ) ಹೆಚ್ಚು ಹಣ ವ್ಯಯಿಸಲಾಗುತ್ತಿದೆ. ಅತ್ಯಾಧುನಿಕ ಯಂತ್ರಗಳನ್ನು ಬಳಸಿದರೂ ಈ ಕಲೆಗಳನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆಗಳನ್ನು ಸ್ವಚ್ಛವಾಗಿಡಲು ಅಧಿಕಾರಿಗಳು ಈಗ ಪ್ರತಿದಿನ ಗಸ್ತು ತಿರುಗುತ್ತಿದ್ದಾರೆ. ಸಾರ್ವಜನಿಕವಾಗಿ ಪಾನ್ ಉಗುಳುವುದು ಕಂಡುಬಂದ ತಕ್ಷಣ 100 ಯುರೋ (10,600) ದಂಡ ವಿಧಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !