ಹೊಸದಿಗಂತ ಡಿಜಿಟಲ್ ಡೆಸ್ಕ್:
ಭದ್ರಾ ಅಣೆಕಟ್ಟು ತುಂಬಿದ್ದು, ನಾಲ್ಕು ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊರಕ್ಕೆ ಬಿಡಲಾಗಿದೆ. ಅಣೆಕಟ್ಟೆಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಆರ್ಪಿಯಲ್ಲಿ ಇರುವ ಭದ್ರಾ ಅಣೆಕಟ್ಟೆ 186 ಅಡಿ ಸಮುದ್ರ ಮಟ್ಟದಿಂದ ಎತ್ತರವಿದೆ. ಅಣೆಕಟ್ಟೆ ಭರ್ತಿಯಾಗಿದ್ದರಿಂದ ಇಂದು ಅಧಿಕಾರಿಗಳು ನಾಲ್ಕು ಕ್ರಸ್ಟ್ ಗೇಟ್ಗಳಿಂದ 12 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಟ್ಟಿದ್ದಾರೆ.
ಅಣೆಕಟ್ಟೆಗೆ 20 ಸಾವಿರ ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಭದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶವಾದ ಚಿಕ್ಕಮಗಳೂರಿನ ಕಳಸ, ಹೊರನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ನದಿಗೆ ನೀರು ಬಿಡಲಾಗುತ್ತಿದೆ. ಒಳ ಹರಿವು ಹೆಚ್ಚಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಬಿಟ್ಟರೆ, ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಬಹುದೆಂದು ಅಧಿಕಾರಿಗಳು ಈಗ ಕಡಿಮೆ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದ್ದಾರೆ.