ಹೊಸದಿಗಂತ ವರದಿ ಚಿತ್ರದುರ್ಗ:
ಬಯಲುಸೀಮೆಯ ಜನರು ಐದಾರು ದಶಕಗಳಿಂದ ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ನನಸಾಗುವತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಭಾನುವಾರ ಲಕ್ಕವಳ್ಳಿ ಅಣೆಕಟ್ಟಿನ ಭದ್ರಾ ಮೇಲ್ದಂಡೆ ಯೋಜನೆಯ ಇನ್ಟೇಕ್ ಪಾಯಿಂಟ್ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬಯಲುಸೀಮೆಯ ಜನರ ದಶಕಗಳ ಕನಸು ಇಂದು ಸಾಕಾರಗೊಳ್ಳುತ್ತಿರುವುದು ಐತಿಹಾಸಿಕ ಕ್ಷಣವಾಗಿದೆ ಎಂದರು. ಯೋಜನೆಗಾಗಿ ಹೋರಾಡಿದ ರೈತರು, ಜನಪ್ರತಿನಿಧಿಗಳು, ಸ್ವಾಮೀಜಿಗಳು ಹಾಗೂ ವಿವಿಧ ಸರ್ಕಾರಗಳ ಅವಧಿಯಲ್ಲಿ ಶ್ರಮಿಸಿದ ನಾಯಕರನ್ನು ಸ್ಮರಿಸಿದರು. ಪಕ್ಷಾತೀತವಾಗಿ ಹಲವು ಸರ್ಕಾರಗಳು ಯೋಜನೆಗೆ ಸಹಕಾರ ನೀಡಿವೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ತುಂಗಾದಿಂದ 17.4 TMC ಹಾಗೂ ಭದ್ರಾದಿಂದ 12.5 TMC ಸೇರಿ ಒಟ್ಟು 29.9 TMC ನೀರು ಹಂಚಿಕೆಯಾಗಿದೆ. ಪ್ರಸ್ತುತ ಯೋಜನೆಯ ಪರಿಷ್ಕೃತ ವೆಚ್ಚ 21,500 ಕೋಟಿಯಾಗಿದ್ದು, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ 12 ತಾಲೂಕುಗಳಿಗೆ ಯೋಜನೆಯಿಂದ ಪ್ರಯೋಜನವಾಗಲಿದೆ. ಸುಮಾರು 2,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, 367 ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ:
ತುಂಗಾದಿಂದ ಬರಬೇಕಿರುವ 17.4 TMC ನೀರಿಗೆ ಸಂಬಂಧಿಸಿದ ಎರಡು ಟವರ್ಗಳ ಕಾಮಗಾರಿ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವ ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು. ಇದರಿಂದ ಭದ್ರೆಯೊಂದಿಗೆ ತುಂಗೆಯ ನೀರೂ ಜಿಲ್ಲೆಯತ್ತ ಹರಿಯುವ ನಿರೀಕ್ಷೆ ಹೆಚ್ಚಾಗಿದೆ.
ಯೋಜನೆಗೆ ಇದುವರೆಗೆ ಸುಮಾರು 11,500 ಕೋಟಿ ವೆಚ್ಚವಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ 2022-23ರ ಬಜೆಟ್ನಲ್ಲಿ ಭರವಸೆ ನೀಡಿದ್ದ 5,300 ಕೋಟಿ ಅನುದಾನ ಬಿಡುಗಡೆಯಾದರೆ ಕಾಮಗಾರಿಗೆ ಇನ್ನಷ್ಟು ವೇಗ ಸಿಗುತ್ತಿತ್ತು. ಸದ್ಯವೂ ಕೇಂದ್ರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಡಾ. ಎಂ. ಚಂದ್ರಪ್ಪ, ಕೆ.ಸಿ. ವೀರೇಂದ್ರ ಪಪ್ಪಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.



