ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಸಂದರ್ಭದಲ್ಲಿ, ಸೇನೆಯಲ್ಲಿರುವ ಪ್ರಮುಖ ಆಯೋಜನೆ ‘ಮಿಷನ್ ಸುದರ್ಶನ ಚಕ್ರ’ವನ್ನು ಶ್ರೀ ಕೃಷ್ಣನ ಸುದರ್ಶನ ಚಕ್ರದ ಹೆಸರಿನಲ್ಲಿ ಬಣ್ಣಿಸಿ, ಅದನ್ನು ಭಾರತದ ರಕ್ಷಣೆಯ ಕೋಟೆ ಎಂದು ಬಣ್ಣಿಸಿದರು.
ಕೃಷ್ಣ ಪರಮಾತ್ಮನು ಯುದ್ಧಭೂಮಿಯಲ್ಲಿ ನೀಡಿದ ಭಗವದ್ಗೀತೆಯ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ. ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯು ಶ್ರೀಕೃಷ್ಣನ ಶ್ಲೋಕಗಳ ಪ್ರೇರಣೆಯಿಂದ ರೂಪಗೊಂಡಿದೆ. “ನಮಗೆ ಶಾಂತಿ ಸ್ಥಾಪನೆಯ ಜೊತೆಗೆ, ಶಾಂತಿಯನ್ನು ರಕ್ಷಿಸುವ ಸಾಮರ್ಥ್ಯವೂ ಇದೆ. ಇದು ಹೊಸ ಭಾರತ. ನಾವು ಯಾರ ಮುಂದೆಯೂ ಬಗ್ಗಲ್ಲ, ಯಾರಿಗೂ ಜಗ್ಗಲ್ಲ. ಆಪರೇಷನ್ ಸಿಂಧೂರ್‌ನಲ್ಲಿ ನಮ್ಮ ಈ ಬದ್ಧತೆಯನ್ನು ಇಡೀ ದೇಶ ಕಂಡಿದೆ,” ಎಂದು ಪ್ರಧಾನಿ ಮೋದಿ ಘೋಷಿಸಿದರು.
ದೇಶದ ವರ್ತಮಾನ ಹಾಗೂ ಭವಿಷ್ಯಕ್ಕಾಗಿ ಜನರು ಒಂಬತ್ತು ಸಂಕಲ್ಪಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದರು. ಸಂತ ಸಮಾಜದ ಆಶೀರ್ವಾದ ದೊರೆತರೆ ಕೋಟ್ಯಂತರ ಜನರು ಈ ಸಂಕಲ್ಪಗಳನ್ನು ಸ್ವೀಕರಿಸಲಿದ್ದಾರೆ. ಭಗವದ್ಗೀತೆಯ ಸಾರವೇ ಲೋಕ ಕಲ್ಯಾಣದ ಕೆಲಸ ಮಾಡಿ ಎನ್ನುವುದಾಗಿದೆ ಎಂದು ಅವರು ತಿಳಿಸಿದರು.

