ಸಂವಿಧಾನದ ಮೂಲ ಪ್ರತಿಯಲ್ಲೂ ಭಗವದ್ಗೀತೆ ಉಲ್ಲೇಖ: ಸುಧಾಂಶು ತ್ರಿವೇದಿ

ಹೊಸದಿಗಂತ ವರದಿ,ಬೆಳಗಾವಿ:

ಸಂವಿಧಾನದ ನಿರ್ಮಾಣವಾದಾಗ, ಸಂವಿಧಾನದ ಮೂಲ ಪ್ರತಿಯಲ್ಲಿ ಹತ್ತು ಹನ್ನೆರೆಡು ಚಿತ್ರಗಳ ಸಹಿತ ಭಗವದ್ಗೀತೆಯನ್ನು ಉಲ್ಲೇಖಿಸಲಾಗಿದೆ. ಇದು ಸದಾಕಾಲ ಭಾರತಕ್ಕೆ ಪ್ರೇರಣೆ ನೀಡುತ್ತಾ ಸಾಗಿದೆ ಎಂದು ರಾಜ್ಯಸಭಾ ಸದಸ್ಯರು, ಚಿಂತಕರೂ ಆಗಿರುವ ಡಾ.ಸುಧಾಂಶು ತ್ರಿವೇದಿ ಹೇಳಿದರು.

ನಗರದ ಲಿಂಗರಾಜ ಕಾಲೇಜ್ ಮೈದಾನದಲ್ಲಿ ಭಗವದ್ಗೀತಾ ಅಭಿಯಾನ ಮತ್ತು ಜನಕಲ್ಯಾಣ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಂವಿಧಾನದ ನೀತಿ, ನಿರ್ದೇಶನದ ತತ್ವಗಳು ಏನಿವೆಯೋ ಅದರ ಮೇಲೆ ಗೀತೋಪದೇಶದ ಚಿತ್ರವಿದೆ. ಇದರ್ಥ ಬಹಳ ಸ್ಪಷ್ಟವಿದೆ. ಭಾರತದ ನೀತಿಗಳ ನಿರ್ದಶನ ಗೀತೆಯ ವಿಚಾರದಂತೆ ಪ್ರತಿರೂಪವಾಗಿರಬೇಕು ಎಂಬುದು ಸಂವಿಧಾನದ ನಿರ್ಮಾತೃಗಳ ಭಾವನೆಯಾಗಿತ್ತು ಎಂದರು.

ಅಲ್ಲದೇ, ಭಗವಾನ ಶ್ರೀರಾಮ, ಸೀತಾ ಮಾತಾ ಹಾಗೂ ಲಕ್ಷ್ಮಣ ಚಿತ್ರ ಸಂವಿಧಾನದ ಯಾವ ಪುಟದಲ್ಲಿದೆಯೋ ಆ ಪುಟದಲ್ಲಿ ಮೂಲ ಅಕಾರ ಶ್ರೀರಾಮನ ಮರ್ಯಾದೆಯಿಂದ ಪ್ರೇರಿತವಾಗಿರಬೇಕು. ನೀತಿ ನಿರ್ದೇಶನ ತತ್ವಗಳು ಭಗವದ್ಗೀತೆಯ ಜ್ಞಾನದಿಂದ ಪ್ರೇರಿತವಾಗಿರಬೇಕೆಂಬುದೂ ಕೂಡ ಸಂವಿಧಾನದ ನಿರ್ಮಾಣ ಮಾಡಿದವರ ಸಂಕೇತವಾಗಿತ್ತು ಎಂದರು.

ಇನ್ನೋರ್ವ ಅತಿಥಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಮಾಜದಲ್ಲಿ ಒಂಟಿತನ, ಏಕಾಂಗಿತನ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕಾಗಿ ಮಕ್ಕಳಿಗೆ ನಮ್ಮ ಪರಂಪರೆ, ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕಿದೆ. ಆ ಕೆಲಸವನ್ನು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಜಗದ್ಗುರು ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಮಾತನಾಡಿ, ಸಮಾಜದಿಂದ ಎಲ್ಲವನ್ನೂಪಡೆದುಕೊಂಡಿರುವ ನಾವು ಸಮಾಜಕ್ಕಾಗಿ ಏನನ್ನಾದರೂ ಕೊಡಬೇಕಾದರೆ ವೃತ್ತಿ ಮಾಡಬೇಕು. ಕರ್ತವ್ಯದಿಂದಲೇ ಸಿದ್ಧಿ ಲಭಿಸುತ್ತದೆ ಎಂದರು.

ಆಶೀರ್ವಚನ ನೀಡಿದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ವ್ಯಕ್ತಿತ್ವ ವಿಕಸನ ನೈತಿಕತೆ ಪುನರುತ್ಥಾನ, ರಾಷ್ಟ್ರೀಯ ಭಾವೈಕ್ಯ, ಸಾಮಾಜಿಕ ಸಾಮರಸ್ಯ ಈ ೪ ಉದ್ದೇಶಗಳೊಂದಿಗೆ ೨೦೦೭ರಲ್ಲಿ ಅಭಿಯಾನ ಪ್ರಾರಂಭಗೊಂಡಿತು. ಭಾರತ ಜಗದ್ಗುರು ಆಗಬೇಕು ಎಂದು ನಾವೆಲ್ಲ ಬಯಸುತ್ತೇವೆ. ಇದಕ್ಕೆ ಭಗವದ್ಗೀತೆಯ ತತ್ವಗಳನ್ನು ನಮ್ಮೊಳಗೆ ಅಳವಡಿಸಿಕೊಳಬೇಕಾಗಿದೆ ಎಂದರು.

ಸಂಸದರಾದ ಈರಣ್ಣ ಕಡಾಡಿ, ಅಣ್ಣಾಸಾಹೇಬ ಜೊಲ್ಲೆ, ಮಂಗಲಾ ಅಂಗಡಿ, ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ, ಶಾಸಕರಾದ ಅಭಯ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಗೋಪಾಲರಾವ ಜಿನಗೌಡ ಸೇರಿದಂತೆ ಅನೇಕ ಶ್ರೀಗಳು, ಗಣ್ಯರು ವೇದಿಕೆ ಮೇಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!