ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಹಾಗೂ ಮನೆ ಧ್ವಂಸ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾನೂನು ಕೈಗೆತ್ತಿಕೊಂಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಗುಲಾಬರಾವ್ ತಿಳಿಸದ್ದಾರೆ.
ಪ್ರಕರಣದ ಹಿನ್ನೆಲೆ:
ಗ್ರಾಮದ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಅದೇ ಗ್ರಾಮದ ಯುವಕನೊಬ್ಬ ಪರಾರಿಯಾಗಿದ್ದ ಎನ್ನಲಾದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ಜನರ ಗುಂಪೊಂದು ಯುವಕನ ಮನೆ ಮೇಲೆ ದಿಢೀರ್ ದಾಳಿ ನಡೆಸಿತ್ತು. ದಾಳಿಯ ವೇಳೆ ಮನೆಯ ಆಸ್ತಿಪಾಸ್ತಿಗಳನ್ನು ಸಂಪೂರ್ಣವಾಗಿ ಜಖಂಗೊಳಿಸಿ, ಧ್ವಂಸ ಮಾಡಲಾಗಿತ್ತು. ಈ ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ತನಿಖೆಗೆ ವಿಶೇಷ ತಂಡ ರಚನೆ:
ಈ ಅಹಿತಕರ ಘಟನೆ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್, “ಸಂತ್ರಸ್ತರ ಕುಟುಂಬಸ್ಥರು ನೀಡಿದ ದೂರಿನನ್ವಯ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ದೂರಿನಲ್ಲಿ ಹೆಸರು ಉಲ್ಲೇಖವಾಗಿರುವ ಹಾಗೂ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ತಕ್ಷಣವೇ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು,” ಎಂದು ತಿಳಿಸಿದರು.
ಕಾನೂನು ಕೈಗೆತ್ತಿಕೊಂಡರೆ ಕಠಿಣ ಶಿಕ್ಷೆ:
ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ವೈಯಕ್ತಿಕ ದ್ವೇಷ ಅಥವಾ ಕುಟುಂಬದ ವಿಚಾರಗಳನ್ನು ನೆಪವಾಗಿಟ್ಟುಕೊಂಡು ಸಾರ್ವಜನಿಕವಾಗಿ ಹಿಂಸಾಚಾರ ನಡೆಸುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು ಗಂಭೀರ ಅಪರಾಧವಾಗಿದೆ. ಇಂತಹ ಕೃತ್ಯಗಳನ್ನು ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣಾತಿಕಠಿಣ ಕ್ರಮ ಜರುಗಿಸಲಾಗುವುದು,” ಎಂದು ಖಡಕ್ ಎಚ್ಚರಿಕೆ ನೀಡಿದರು.
ಪ್ರಾಣಹಾನಿಯಿಲ್ಲ, ತನಿಖೆ ಪ್ರಗತಿಯಲ್ಲಿ:
“ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದ ಈ ದಾಳಿಯ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾಗೂ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ. ಸದ್ಯಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣದ ಹಿಂದಿರುವ ಎಲ್ಲಾ ಆಯಾಮಗಳು ಹಾಗೂ ಪ್ರಚೋದನೆ ನೀಡಿದವರ ಕುರಿತು ಪೊಲೀಸರು ಆಳವಾದ ತನಿಖೆಯನ್ನು ಮುಂದುವರಿಸಿದ್ದಾರೆ,” ಎಂದು ಕಮಿಷನರ್ ಭೂಷಣ್ ಬೋರಸೆ ತಿಳಿದ್ದಾರೆ.



