ಹೊಸದಿಗಂತ ವರದಿ, ಬಳ್ಳಾರಿ
ಬಿಜೆಪಿ ಸರ್ಕಾರಕ್ಕೆ ಜನರ ಸಂಕಷ್ಟಗಳನ್ನು ಕಾಣುವ ಕಣ್ಣಿಲ್ಲ , ಕಿವಿಯೂ ಇಲ್ಲ, ಜೊತೆಗರ ಹೃದಯವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಟೀಕಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನಾ ಸೋಂಕಿಗೆ ಒಳಗಾಗಿ ಮೃತಪಟ್ಟವರಿಗೆ ಈ ವರೆಗೆ ಪರಿಹಾರ ಕೊಡಲು ಸರ್ಕಾಕ್ಕೆ ಆಗಿಲ್ಲ. ಅವರ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ, ಅವರಿಗೆ ಕನಿಷ್ಟ ಪರಿಹಾರ ಕೊಡಲೂ ಸಾಧ್ಯವಾಗದಕ್ಕೆ ಬಿಜೆಪಿಗೆ ನಾಚಿಕೆಯಾಗಬೇಕು. ಪಾದಯಾತ್ರೆ ವೇಳೆ ನಾನು ಹಾಗೂ ರಾಹುಲ್ ಗಾಂಧಿ ಅವರು ಜನರೊಂದಿಗೆ ಬೆರೆತಾಗ ಬಡ ಜನರ ಕಷ್ಟ, ವೇದನೆಗಳನ್ನು ಕಂಡು ಕಣ್ಣೀರು ಸುರಿಸಿದ್ದೇನೆ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ ಎಂದರು.
ಇಂಧನ ಸಚಿವರಾಗಿದ್ದಾಗ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಈಗ ಹೇಳುತ್ತಿದ್ದಾರೆ. ಕಳೆದ 3 ವರ್ಷ ಏನು ಕಡ್ಲೆಕಾಯಿ ತಿಂತಿದ್ರಾ, ಈ ಬಗ್ಗೆ ಮುಲಾಜಿಲ್ಲದೇ ಸಿಬಿಐ ತನಿಖೆಗೆ ಒಳಪಡಿಸಿ. ನನ್ನದೇನೂ ಅಭ್ಯಂತರವಿಲ್ಲ. ಕಳೆದ 2006 ರಿಂದ ಈ ವರೆಗೆ ನಡೆದಿದ್ದೆಲ್ಲವೂ ತನಿಖೆಯಾಗಲಿ, ತಪ್ಪು ಮಾಡಿದವರು ಯಾರೇ ಆಗಿರಲಿ ನಿಸ್ಪಕ್ಷಪಾತವಾಗಿ ಶಿಕ್ಷೆಯಾಗಲಿ ಎಂದು ಸವಾಲೆಸೆದರು. ಸಿಎಂ ಬೊಮ್ಮಾಯಿ ಈ ಕುರಿತು ಚರ್ಚೆಗೆ ಬಂದರೆ ನಾನೂ ಸಿದ್ದ ಎಂದು ಹೇಳಿದರು.
ಈ ಭಾರತ್ ಜೊಡೋ ಯಾತ್ರೆ ರಾಜಕೀಯ ಪ್ರೇರಿತವಲ್ಲ. ಚುನಾವಣೆಗಾಗಿ ನಡೆದಿಲ್ಲ, ಒಡೆದ ಮನಸ್ಸುಗಳನ್ನು ಒಗ್ಗೂಡಿಸುವ ಪಾದಯಾತ್ರೆ ಇದಾಗಿದೆ. ಅಂದು ಉಪ್ಪಿನ ಸತ್ಯಾಗ್ರಹ ನಡೆದರೇ, ಇಂದು ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬಗ್ಗೆ ದೇಶದ ಜನರಿಗೆ ಅಪಾರ ಅಭಿಮಾನವಿದ್ದು, ಯಾತ್ರೆಯಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಅ.17ರಂದು ಎಐಸಿಸಿ ಚುನಾವಣೆ ನಡೆಯಲಿದ್ದು, ಅಂದು ಯಾತ್ರೆಗೆ ಬಿಡುವು ಇರಲಿದೆ. ಕ್ಯಾಂಪ್ ಎಲ್ಲಿ ಇರುತ್ತೇ ಅಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ, ರಾಹುಲ್ ಗಾಂಧ ಅವರು ಮತದಾನ ಮಾಡಲಿದ್ದಾರೆ ಎಂದರು. ಉಳಿದವರು ಕೆಪಿಸಿಸಿಯಲ್ಲೇ ಬಂದು ಮತದಾನ ಮಾಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಶ್ರೀಧರ ಬಾಬು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಶಾಸಕ ಬಿ.ನಾಗೇಂದ್ರ, ಮಾಜಿ ಶಾಸಕ ಅನೀಲ್ ಲಾಡ್, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಇತರರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ