ಹೊಸ ದಿಗಂತ ವರದಿ, ಭಟ್ಕಳ:
ಇಲ್ಲಿನ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ ಗುರುವಾರ ರಾಮನವಮಿಯ ಪರ್ವಕಾಲದಲ್ಲಿ ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ಸುಸಂಪನ್ನಗೊಂಡಿತು.
ಶ್ರೀ ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೆಯ ದಿನದಂದು ಆರಂಭಗೊಳ್ಳುವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು.
ಪ್ರತಿ ದಿನವೂ ಕೂಡಾ ಒಂದೊಂದು ಉತ್ಸವವಾದಿಗಳು ನಡೆದು, ಸಪ್ತಮಿ ಹಾಗೂ ಅಷ್ಟಮಿಯಂದು ಹೂವಿನ ರಥೋತ್ಸವ ಸಹಸ್ರಾರು ಭಕ್ರವೃಂದದೊಂದಿಗೆ ನಡೆಯಿತು.
ರಾಮನವಮಿಯಂದು ಬೆಳಿಗ್ಗೆ ದೇವರು ರಥಾರೋಹಣ ಮಾಡುವ ಮೂಲಕ ಬೆಳಿಗ್ಗೆ ರಥೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಗುರುವಾರದಂದು ಸಂಜೆ ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮ ಭಕ್ತನ ಹನುಮನ ರಥೋತ್ಸವ ಜರುಗಿತು. ಸಂಪ್ರದಾಯದಂತೆ ಜೈನ ಹಾಗು ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.
ಭಟ್ಕಳ ರಥೋತ್ಸವ
ಪ್ರತಿವರ್ಷ ರಾಮನವಮಿಯಂದು ಜರುಗುವ ಜಾತ್ರೆಯಲ್ಲಿ ಪರಸ್ಪರ ಸೌಹಾರ್ಧತೆಗೆ ಭಟ್ಕಳ ರಥೋತ್ಸವ ಪ್ರಮುಖವಾದದ್ದು. ಗುರುವಾರ ಸಂಜೆ ದೇವರ ಬ್ರಹ್ಮರಥೋತ್ಸವಕ್ಕೂ ಮುನ್ನ ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯಘೋಷಗಳ ಮೂಲಕ ತೆರಳಿ ಮುಸ್ಲಿಂ, ಜೈನ ಹಾಗೂ ಪ್ರಭು ಕುಟುಂಬಕ್ಕೆ ವೀಳ್ಯ ಸಮೇತ ಆಹ್ವಾನ ನೀಡಿದ್ದು ಆ ಬಳಿಕ ರಥದಲ್ಲಿ ಹನುಮಂತ ವಿರಾಜಮಾನರಾಗಿ ಕುಳಿತು ಪೂಜಾ ವಿಧಿ ವಿಧಾನದ ನಂತರ ಸಹಸ್ರಾರು ಭಕ್ತರು ಜೈ ಶ್ರೀ ರಾಮ ಘೋಷಣೆ ಕೂಗುತ್ತಾ ರಥವನ್ನು ಎಳೆದು ಹನುಮಂತನ ಸವಾರಿಯ ಮೂಲಕ ರಥೋತ್ಸವ ನಡೆಯಿತು.
ಮುಸ್ಲಿಂ ಸಮುದಾಯದ ಚರ್ಕಿನ್ ಕುಟುಂಬದ ಮೊಹಮ್ಮದ್ ಅನ್ಸಾರಿ, ಇನಾಯತ್ ಉಲ್ಲಾ ಶಾಬಂದ್ರಿ ಹಾಗೂ ಜೈಲಾನಿ ಶಾಬಂದ್ರಿ, ಜೈನ ಸಮುದಾಯದ ಉದಯಕುಮಾರ್ ಜೈನ್, ಪ್ರಭು ಕುಟುಂಬದ ವಾಮನ್ ಪ್ರಭು ದೇಗುಲದ ಆಹ್ವಾನ ಸ್ವೀಕರಿಸಿದರು. ಇದೇ ರೀತಿ ಪ್ರತಿ ವರ್ಷವೂ ಹಿಂದು- ಮುಸ್ಲಿಂ, ಜೈನರಾದಿಯಾಗಿ ಎಲ್ಲ ಧರ್ಮದವರೂ ಪಾಲ್ಗೊಳ್ಳುವುದು ಭಟ್ಕಳ ಜಾತ್ರೆಯ ವಿಶೇಷವಾಗಿದೆ.
ಬ್ರಹ್ಮರಥ ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲ ದೇವಾಲಯದ ಮುಂಭಾಗದವರೆಗೂ ಎಳೆಯಲಾಯಿತು.