ಹೊಸ ದಿಗಂತ ವರದಿ,ತಿಪಟೂರು :
ಕಲ್ಪತರು ನಾಡಿನ ಪ್ರಸಿದ್ದ ಯಾತ್ರಾಕ್ಷೇತ್ರವಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಜು.24ರ ಗುರುವಾರ ಭೀಮನ ಅಮಾವಾಸ್ಯೆ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆರೆಗೋಡಿ-ರಂಗಾಪುರ ಸುಕ್ಷೇತ್ರದಲ್ಲಿ ಪ್ರತೀ ಅಮಾವಾಸ್ಯೆಗಳಲ್ಲಿಯೂ ವಿಶೇಷ ಪೂಜೆ ಹಾಗೂ ಕಟ್ಟಳೆ ಮತ್ತು ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅದರಲ್ಲಿ ಭೀಮನ ಅಮಾವಾಸ್ಯೆ ಇಲ್ಲಿ ಪ್ರಸಿದ್ಧವಾಗಿದ್ದು ಆಷಾಡ ತಿಂಗಳಲ್ಲಿ ಬರುವ ಈ ಅಮಾವಾಸ್ಯೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ಸುಕ್ಷೇತ್ರಾಧಿಪತಿಗಳಾದ ಶ್ರೀರಂಗ-ಶಂಕರರ ದೇವಾಲಯಗಳು ಹಾಗೂ ಎಲ್ಲಾ ಆರು ಗುರುವರೇಣ್ಯರ ಗದ್ದುಗೆಗಳಿಗೆ ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಮತ್ತು ವಿವಿಧ ಪೂಜಾದಿ ಕೈಂಕರ್ಯಗಳು ಸೇರಿದಂತೆ ಭಜನಾ ಮಂದಿರದಲ್ಲಿ ಅಹೋರಾತ್ರಿ ಅಖಂಡ ಭಜನಾ ಸೇವೆ ಭಕ್ತ ಬಂಧುಗಳಿಂದ ನಡೆಯಲಿದೆ. 40 ರಿಂದ 50ಸಾವಿರ ಮಂದಿ ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು ತಿಪಟೂರಿನಿಂದ ಸುಕ್ಷೇತ್ರ ಕೆರೆಗೋಡಿ-ರಂಗಾಪುರಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ ತಿಪಟೂರು ಘಟಕದಿಂದ ನಿರಂತರ ಬಸ್ ಸೌಲಭ್ಯ ಒದಗಿಸಲಾಗಿದೆ.
ಆಗಮಿಸುವ ಭಕ್ತಸ್ತೋಮಕ್ಕೆ ಸಿಹಿಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಅಂದು ರಾತ್ರಿ 10 ಗಂಟೆಗೆ ನಾಡಿನ ಪ್ರಸಿದ್ದ ಜಾನಪದ ಕಲಾತಂಡಗಳೊಂದಿಗೆ ಪುಷ್ಪಾಲಂಕೃತ ಮಂಟಪದಲ್ಲಿ ಉತ್ಸವ, ಸುಗಮ ಸಂಗೀತ, ಕಾರ್ಯಕ್ರಮ ನಡೆಯಲಿದೆ. ಬಿಗಿ ಪೊಲೀಸ್ ವ್ಯವಸ್ಥೆ ಹಾಗೂ ವಾಹನ ನಿಲುಗಡೆಗೂ ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗಿದೆ. ಭೀಮನ ಅಮಾವಾಸ್ಯೆ ಭಕ್ತಾಧಿಗಳು ಮತ್ತು ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಸಹಕಾರದೊಂದಿಗೆ ನಡೆಯಲಿದ್ದು ಭಕ್ತಬಂಧುಗಳು ಪಾಲ್ಗೊಂಡು ಶ್ರೀರಂಗ-ಶಂಕರರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.