ಹೊಸದಿಗಂತ, ಹಾಸನ:
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಮೂಹದ 15ನೇ ಸಿ.ಬಿ.ಎಸ್.ಇ. ಶಾಲೆಯ ಭೂಮಿ ಪೂಜೆಯನ್ನು ಈ ದಿನ ಹಾಸನದ ಎಸ್.ಎಂ.ಕೆ. ನಗರ ವಸತಿ ಬಡಾವಣೆಯಲ್ಲಿ ನೆರವೇರಿಸಲಾಯಿತು.
ಶ‍್ರೀ ಷ. ಬ್ರ. ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ, ಶ್ರೀ ಸಂಸ್ಥಾನ ಹಿರೇಮಠ, ಕಾರ್ಜುವಳ್ಳಿ, ಆಲೂರು, ದಿವ್ಯ ಸಾನ್ನಿಧ‍್ಯವಿತ್ತ ಕಾರ್ಯಕ್ರಮದಲ್ಲಿ ಶ್ರೀ ಜಿ. ಎಲ್. ಮುದ್ದೇಗೌಡರು, ಅಧ್ಯಕ್ಷರು, ಹಾಸನ ಜಿಲ್ಲಾ ಒಕ್ಕಲಿಗರ ಸಂಘ, ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಜಿ. ಎಲ್. ಮುದ್ದೇಗೌಡರು ನೂತನವಾಗಿ ನಿರ್ಮಾಣವಾಗುತ್ತಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಆರ್ಥಿಕವಾಗಿ ಸಬಲರಲ್ಲದವರು ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಆದ್ಯತೆ ಕೊಟ್ಟು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಶಾಲೆಯ ಮಾತೃಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ್ ಹೆಗ್ಡೆಯವರು ಮಾತನಾಡುತ್ತಾ, ಆಧುನಿಕ ವಿಚಾರ ವೈವಿಧ್ಯದ ಪ್ರವಾಹದಲ್ಲಿ ಮಕ್ಕಳು ಕೊಚ್ಚಿಹೋಗದಂತೆ ಭಾರತೀಯ ಸಂಸ್ಕಾರಯುತ ಶಿಕ್ಷಣ ನೀಡುವುದು ಹೊಸದಾಗಿ ಒಡಮೂಡುತ್ತಿರುವ ವಿದ್ಯಾಕೇಂದ್ರದ ಆಶಯವಾಗಿದ್ದು, 2025-26ರ ಶೈಕ್ಷಣಿಕ ವರ್ಷದಿಂದ ಶಾಲೆಯು ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.