ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್: ಸಚಿವ ಮಧು ಬಂಗಾರಪ್ಪ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ (Cycle) ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ (Ravikumar) ಪ್ರಶ್ನಿಸಿ, ಶಾಲಾ ಮಕ್ಕಳಿಗೆ ಯಾಕೆ ಸೈಕಲ್ ಕೊಡ್ತಿಲ್ಲ? ಬಿಜೆಪಿ‌ ಸರ್ಕಾರ (BJP Government) ಸೈಕಲ್ ನಿಲ್ಲಿಸಿತ್ತು ಒಪ್ಪುತ್ತೇನೆ? ಅದಕ್ಕೆ ಜನ ನಮ್ಮನ್ನ ಇಲ್ಲಿಗೆ ಕೂರಿಸಿದ್ದಾರೆ. ಆದ್ರೆ ಈ ಸರ್ಕಾರಕ್ಕೆ ಸೈಕಲ್ ಕೊಡಲು ಹಣದ ಕೊರತೆ ಇದೆಯಾ? ಎಂದು ಪ್ರಶ್ನೆ ಮಾಡಿದರು. ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರಕ್ಕೆ 100 ರೂ. ಕೊಡ್ತಿದ್ದಾರೆ. ಖರ್ಚೀಫ್ ಗೆ ಕೊಡುವಷ್ಟು ಹಣ ಕೊಡ್ತಿದ್ದಾರೆ. ಇಷ್ಟು ಹಣ ಶೂ, ಸಾಕ್ಸ್, ಸಮವಸ್ತ್ರಕ್ಕೆ ಸಾಕಾಗುತ್ತದೆಯೇ? ಶೂ, ಸಾಕ್ಸ್ ಹಣ ಹೆಚ್ಚಳ ಮಾಡಬೇಕು ಅಂತ ಒತ್ತಾಯ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, 2023-24ನೇ ಸಾಲಿನಲ್ಲಿ 55,43,828 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗಿದೆ. 45,45,749 ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೈಕಲ್ ಹಿಂದಿನ ಸರ್ಕಾರ ಕೊಡೋದು ನಿಲ್ಲಿಸಿದೆ. ನಾನು ಈಗಾಗಲೇ ಸಿಎಂ ಜೊತೆಗೆ ಮಾತಾಡಿದ್ದೇನೆ. ಮುಂದಿನ ವರ್ಷದಿಂದಲೇ 8ನೇ ತರಗತಿ ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

1-8ನೇ ತರಗತಿ ಮಕ್ಕಳಿಗೆ ನೀಡಲಾಗುತ್ತಿದ್ದ ಮೊಟ್ಟೆ, ಚಿಕ್ಕಿಯನ್ನು ನಮ್ಮ ಸರ್ಕಾರ ಬಂದ್ಮೇಲೆ 9 ಮತ್ತು 10ನೇ ತರಗತಿಗೂ ವಿಸ್ತರಿಸಿದ್ದೇವೆ. ಕಳೆದ ಸರ್ಕಾರದ ಅವಧಿಯಲ್ಲಿ ಸಮವಸ್ತ್ರ ಖರೀದಿಯಲ್ಲಿ ಕ್ವಾಲಿಟಿ ಸಮಸ್ಯೆ ಆಗಿದೆ. ಹಾಗಾಗಿ ಒಪನ್ ಟೆಂಡರ್ ಮೂಲಕ ಸಮವಸ್ತ್ರ ಖರೀದಿ ಆಗುತ್ತದೆ. ಈ ವರ್ಷದ ಟೆಂಡರ್ ಪ್ರಕ್ರಿಯೆ ಮುಗಿದು ಹೋಗಿದೆ. ಮುಂದಿನ ವರ್ಷದಿಂದ ಉತ್ತಮ ಕ್ವಾಲಿಟಿ ಸಮವಸ್ತ್ರ ನೀಡಲು ಕ್ರಮವಹಿಸುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!