ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವಿರಾರು ಅಭಿಮಾನಿಗಳ ಜೈಕಾರಗಳ ನಡುವೆ ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ತಮ್ಮ ಜೀವನದ ಮುಂದಿನ ಅಧ್ಯಾಯದ ಕುರಿತು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮಲೇಷ್ಯಾದ ವೇದಿಕೆಯಲ್ಲಿ ನಿಂತು ಮಾತನಾಡಿದ ವಿಜಯ್, ತನ್ನನ್ನು ಇಲ್ಲಿಯವರೆಗೆ ಕರೆತಂದ ಅಭಿಮಾನಿಗಳಿಗಾಗಿ ದೊಡ್ಡ ತ್ಯಾಗಕ್ಕೆ ಸಿದ್ಧನಾಗಿದ್ದೇನೆ ಎಂದು ಹೇಳಿ ಚಿತ್ರರಂಗದಿಂದ ಹಿಂದೆ ಸರಿಯುವ ಘೋಷಣೆಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಡಿದ್ದಾರೆ.
ಮಲೇಷ್ಯಾದ ಬುಕಿಟ್ ಜಲೀಲ್ ಅರೆನಾದಲ್ಲಿ ನಡೆದ ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ವಿಜಯ್ ಮಸ್ತ್ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯ ಮೇಲೆ ನೃತ್ಯ ಸಂಯೋಜಕ ಪ್ರಭುದೇವ ಹಾಗೂ ತಂಡದೊಂದಿಗೆ ವೇದಿಕೆಗೆ ಆಗಮಿಸಿದ ದೃಶ್ಯ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತು. ‘ದಳಪತಿ’ ಹಾಡಿಗೆ ನೃತ್ಯ ಮಾಡಿದ ವಿಜಯ್, ವೇದಿಕೆಯಲ್ಲಿದ್ದ ತಂದೆ ಎಸ್.ಎ. ಚಂದ್ರಶೇಖರ್ ಅವರನ್ನು ಅಪ್ಪಿಕೊಂಡು ಭಾವುಕರಾದರು.
ಇದನ್ನೂ ಓದಿ:
ಭಾಷಣದಲ್ಲಿ ಮಾತನಾಡಿದ ವಿಜಯ್, ಸಣ್ಣ ಸಣ್ಣ ಮರಳಿನ ಮನೆ ಕಟ್ಟುವ ಆಸೆಯೊಂದಿಗೆ ಚಿತ್ರರಂಗ ಪ್ರವೇಶಿಸಿದ್ದೆ, ಆದರೆ ಅಭಿಮಾನಿಗಳು ನನಗೆ ಅರಮನೆ ಕಟ್ಟಿಕೊಟ್ಟರು ಎಂದು ಹೇಳಿದರು. 33 ವರ್ಷಗಳಿಂದ ನನ್ನ ಜೊತೆ ನಿಂತಿರುವ ಅಭಿಮಾನಿಗಳಿಗಾಗಿ ಏನಾದರೂ ಮಾಡಬೇಕೆಂಬ ಉದ್ದೇಶದಿಂದಲೇ ನಾನು ಈಗ ಸಿನಿಮಾ ಜೀವನಕ್ಕೆ ತೆರೆ ಎಳೆಯುತ್ತಿದ್ದೇನೆ ಎಂದು ಘೋಷಿಸಿದರು. 2026ರಲ್ಲಿ ಇತಿಹಾಸ ಮರುಕಳಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ನಟ ನಾಸರ್ ಸೇರಿದಂತೆ ಹಲವು ನಿರ್ದೇಶಕರು ಮತ್ತು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ವಿಜಯ್ ಅವರ ಹೊಸ ಪ್ರಯಾಣಕ್ಕೆ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತು.

