ಹೊಸದಿಗಂತ ವರದಿ ಬೆಳಗಾವಿ:
ಅಬಕಾರಿ ಇಲಾಖೆ ಅಧಿಕಾರಿಗಳು ನಗರದಲ್ಲಿ ಶುಕ್ರವಾರ ಮುಂಜಾನೆ ಭರ್ಜರಿ ಬೇಟೆ ನಡೆಸಿದ್ದು, ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 50 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಇಲ್ಲಿನ ಕಾಕತಿ ಬಳಿ ದಾಳಿ ನಡೆಸಿದ ಅಬಕಾರಿ ಪೊಲೀಸರು, ಲಾರಿ ಸಮೇತ ಮದ್ಯದ ಬಾಕ್ಸ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಮೂಲದ ಆದಮ್ ಕುತಬುದ್ದೀನ್ ಹಾಗೂ ಆಶೀಫ್ ರೆಹಮಾನ್ ಎಂಬ ಇಬ್ಬರು ಆರೋಪಿಗಳಾದ ಲಾರಿ ಚಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
17 ಚಕ್ರದ ದೊಡ್ಡ ಲಾರಿಯಲ್ಲಿ ಸುಮಾರು 650 ಬಾಕ್ಸ್ ಗಳಲ್ಲಿ ಮದ್ಯವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ವಿಶೇಷವೆಂದರೆ ಮಶ್ರೂಮ್ ಬೀಜಗಳ ಚೀಲದ ಮಧ್ಯದಲ್ಲಿ ಗೋವಾ ಸಾರಾಯಿ ಬಾಕ್ಸ್ ಗಳನ್ನಿಟ್ಟು ಸಿನಿಮಾ ಮಾದರಿಯಲ್ಲಿ ಆರೋಪಿಗಳು ಮದ್ಯ ಸಾಗಿಸುತ್ತಿದ್ದರು. ಗೋವಾದಿಂದ ಕರ್ನಾಟಕ ಮಾರ್ಗವಾಗಿ ಮಧ್ಯಪ್ರದೇಶಕ್ಕೆ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.