Monday, September 8, 2025

BIG NEWS | ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್‌ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಹೆಸರು ಘೋಷಿಸಲಾಗಿದೆ.

ತಮಿಳುನಾಡು ಮೂಲದ ರಾಧಾಕೃಷ್ಣನ್‌ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಅವರು ಈ ಹಿಂದೆ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. ಅಲ್ಲದೆ ಕೊಯಂಬತ್ತೂರಿನಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಭಾನುವಾರ ದೆಹಲಿಯಲ್ಲಿ (ಆಗಸ್ಟ್‌ 17) ನಡೆದ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉಪರಾಷ್ಟ್ರಪತಿ ಚುನಾವಣೆ ಸೆಪ್ಟಂಬರ್‌ 9ರಂದು ನಡೆಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸಿ.ಪಿ. ರಾಧಾಕೃಷ್ಣನ್‌ ಆಯ್ಕೆಯನ್ನು ಘೋಷಿಸಿದರು.

ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಸಿಪಿ ರಾಧಾಕೃಷ್ಣನ್, ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2004 ರಿಂದ 2007ರ ವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತಮಿಳುನಾಡಿನಲ್ಲಿ 93 ದಿನಗಳ ರಥಯಾತ್ರೆ ನಡೆಸಿ ಪಕ್ಷ ಸಂಘಟಿಸಿದ ಕೀರ್ತಿೂ ರಾಧಾಕೃಷ್ಣನ್‌ಗಿದೆ. 2012ರಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಮೇಲಿನ ದಾಳಿ ವಿರೋಧಿಸಿ ಮೆಟ್ಟುಪಾಲಯಂನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ತಮಿಳನಾಡು ಪೊಲೀಸರು ಬಂಧಿಸಿದ್ದರು.

2004ರ ವಿಶ್ವಸಂಸ್ಥೆಗೆ ತೆರಳಿದ ಪಾರ್ಲಿಮೆಂಟ್ ನಿಯೋಗದ ಸದಸ್ಯರಾಗಿದ್ದ ಸಿಪಿ ರಾಧಾಕೃಷ್ಣನ್, 58ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು.

ಇದನ್ನೂ ಓದಿ