ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಪಾಕ್ ನಡುವೆ ಯುದ್ಧದ ಕಾರ್ಮೋಡ ಇನ್ನಷ್ಟು ದಟ್ಟವಾಗುತ್ತಿದ್ದು, ಈ ನಡುವೆ ಮೇ 7 ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಖಡಕ್ ಸೂಚನೆ ನೀಡಿದೆ.
ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸಲು ಯಾವ ರೀತಿಯಲ್ಲಿ ಸಿದ್ಧತೆಗಳು ಇವೆ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಮಾಕ್ ಡ್ರಿಲ್ ಹೊಂದಿದ್ದು, ಈ ಮೂಲಕ ‘ಭವಿಷ್ಯ’ ಹೇಗಿದೆ ಎಂಬುದನ್ನು ಕೇಂದ್ರ ಸರ್ಕಾರ ಸೂಚ್ಯವಾಗಿಯೇ ನಾಗರಿಕರಿಗೆ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯ ನೀಡಿರುವ ಈ ಆದೇಶದಲ್ಲಿ ನಾಗರಿಕರ ರಕ್ಷಣೆಯ ಸಂಬಂಧ ಮೇ 7 ರಂದು ದೇಶಾದ್ಯಂತ ಅಣಕು ಪ್ರದರ್ಶನ ಮಾಡಿಸಬೇಕು, ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಅದರಂತೆ ಬುಧವಾರ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಸಲು ಸೂಚಿಸಲಾಗಿದೆ.
ಇದಲ್ಲದೆ, ರಾಷ್ಟ್ರವ್ಯಾಪಿ ನಡೆಯುವ ಈ ಮಾಕ್ ಡ್ರಿಲ್ ಪರಿಣಾಮಕಾರಿಗೊಳಿಸಲು ಸ್ಥಳೀಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ನಾಗರಿಕ ರಕ್ಷಣಾ ಸಿಬ್ಬಂದಿ ಸಂಘಟಿತರಾಗಿ ಭಾಗವಹಿಸುವಂತೆಯೂ ಸಚಿವಾಲಯ ಒತ್ತಿ ಹೇಳಿದೆ.
ಏನಿದೆ ಗೃಹ ಸಚಿವಾಲಯದ ಆದೇಶದಲ್ಲಿ?
ವಾಯುದಾಳಿ ಎಚ್ಚರಿಕೆ ಸೈರನ್ ಕಾರ್ಯಾಚರಣೆ
ದಾಳಿ ಸಂದರ್ಭ ಸ್ವರಕ್ಷಣೆಗೆ ನಾಗರಿಕರು, ವಿದ್ಯಾರ್ಥಿಗಳಿಗೆ ರಕ್ಷಣಾ ಅಂಶಗಳ ಕುರಿತು ತರಬೇತಿ
ಕ್ರ್ಯಾಶ್ ಬ್ಲ್ಯಾಕ್‌ಔಟ್ ಕ್ರಮ
ಪ್ರಮುಖ ಕಟ್ಟಡ, ಸ್ಥಾವರ ಮರೆಮಾಚುವುದು
ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸುವ ಪೂರ್ವಾಭ್ಯಾಸ
ಇದು ಈ ಹಿಂದೆ 1971 ರಲ್ಲಿ ನಡೆದಿತ್ತು
ಇದೇ ರೀತಿಯ ಮಾಕ್ ಡ್ರಿಲ್ ಈ ಹಿಂದೆ 1971 ರಲ್ಲಿ ನಡೆದಿತ್ತು. ಅದೇ ವರ್ಷದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಕೂಡಾ ಸಂಭವಿಸಿತ್ತು.