ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣರಾಜ್ಯೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ದೇಶದ ಭದ್ರತೆಗೆ ಸವಾಲೆಸೆಯುವಂತಹ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಬಾಂಬ್ ಸ್ಫೋಟದ ಕಹಿ ನೆನಪಿನ ನಡುವೆಯೇ, ಈಗ ಬೃಹತ್ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದು ಭಾರೀ ಆತಂಕ ಮೂಡಿಸಿದೆ.
ಅಕ್ರಮ ಗಣಿಗಾರಿಕೆ ತಡೆಯಲು ರಾಜಸ್ಥಾನ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ, ನಾಗೌರ್ ಜಿಲ್ಲೆಯ ಹರ್ಸೌರ್ ಗ್ರಾಮದ ತೋಟದ ಮನೆಯೊಂದರಲ್ಲಿ ಬಚ್ಚಿಟ್ಟಿದ್ದ ಸ್ಫೋಟಕಗಳ ರಾಶಿ ಪತ್ತೆಯಾಗಿದೆ.
ವಶಪಡಿಸಿಕೊಂಡ ವಸ್ತುಗಳ ವಿವರ:
ಅಮೋನಿಯಂ ನೈಟ್ರೇಟ್: 187 ಚೀಲಗಳಲ್ಲಿ ತುಂಬಿದ್ದ ಸುಮಾರು 9,550 ಕೆಜಿ ತೂಕದ ಸ್ಫೋಟಕ.
ಡಿಟೋನೇಟರ್‌ಗಳು: ಒಟ್ಟು 9 ಪೆಟ್ಟಿಗೆಗಳು.
ಫ್ಯೂಸ್ ವೈರ್‌ಗಳು: 12 ಪೆಟ್ಟಿಗೆ ಮತ್ತು 15 ಬಂಡಲ್ ನೀಲಿ ವೈರ್, ಹಾಗೂ 12 ಪೆಟ್ಟಿಗೆ ಮತ್ತು 5 ಬಂಡಲ್ ಕೆಂಪು ಫ್ಯೂಸ್ ವೈರ್.
ಈ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪಿ ಸುಲೇಮಾನ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ ಈಗಾಗಲೇ ಮೂರು ಕ್ರಿಮಿನಲ್ ಪ್ರಕರಣಗಳಿದ್ದು, ಇದೀಗ ಸ್ಫೋಟಕ ಕಾಯ್ದೆ 1884 ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮೃದುಲ್ ಕಚ್ಛವಾ ತಿಳಿಸಿದ್ದಾರೆ.




