September 21, 2026
Monday, September 21, 2026
spot_img

ಆಲೂರಿನ ಗ್ರಾಮಸ್ಥರಿಗೆ ಬಿಗ್ ರಿಲೀಫ್: ಕೊನೆಗೂ ಬೋನಿಗೆ ಬಿದ್ದ ಚಿರತೆ

ಹೊಸದಿಗಂತ ವರದಿ ಹಾಸನ :

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬಿದ್ದಿದೆ. ಚಿರತೆ ಸೆರೆ ಸಿಕ್ಕಿರುವ ಹಿನ್ನೆಲೆಯಲ್ಲಿ ಭಯದಲ್ಲಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಆಲೂರು ತಾಲ್ಲೂಕಿನ ಕದಾಳು, ಕಬ್ಬಿನಹಳ್ಳಿ, ಬಿಲುಗುಂದ, ಮುಳುಗಡೆ ಹಾಗೂ ಗೊದ್ದನಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಚಿರತೆ ಓಡಾಟ ಕಂಡುಬಂದಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಿರತೆಯನ್ನು ಸೆರೆಹಿಡಿಯುವ ಉದ್ದೇಶದಿಂದ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಂಡು, ಎರಡು ದಿನಗಳ ಹಿಂದೆ ವಿವಿಧ ಸ್ಥಳಗಳಲ್ಲಿ ಬೋನುಗಳನ್ನು ಅಳವಡಿಸಿತ್ತು. ಆದರೆ ಚಿರತೆ ಬೋನಿಗೆ ಬೀಳದೆ ಅರಣ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತ್ತು.

ಇದನ್ನೂ ಓದಿ:

ಶುಕ್ರವಾರ ರಾತ್ರಿ ಕದಾಳು ಗ್ರಾಮದ ಸಮೀಪ ಯಗಚಿ ನದಿ ದಡದಲ್ಲಿರುವ ಬಿಜೆಪಿ ಮಾಜಿ ಅಧ್ಯಕ್ಷ ಲೋಕೇಶ್ ಹಾಗೂ ನವೀನ್ ಅವರ ಜಮೀನಿನಲ್ಲಿ ಅಳವಡಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಚಿರತೆ ಬೋನಿಗೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸದ್ಯ ಚಿರತೆಯನ್ನು ಸುರಕ್ಷಿತವಾಗಿ ಬೋನಿನಲ್ಲಿ ಇರಿಸಲಾಗಿದ್ದು, ಅಧಿಕಾರಿಗಳ ಪರಿಶೀಲನೆ ಬಳಿಕ ಅನುಮತಿ ದೊರೆತರೆ ಇಂದು ಚಿರತೆಯನ್ನು ಕಾಡಿಗೆ ಬಿಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಆಲೂರು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಚಿರತೆ ಸೆರೆ ಸಿಕ್ಕಿರುವುದರಿಂದ ಕದಾಳು, ಬಿಲುಗುಂದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಲವು ದಿನಗಳಿಂದ ಕಾಡುತ್ತಿದ್ದ ಚಿರತೆ ಭೀತಿ ಇದೀಗ ದೂರವಾಗಿರುವುದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !