ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಮಡೆನೂರು ಮನುಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಮೇಲೆ ಹೇರಿದ್ದ ನಿಷೇಧವನ್ನು ಚಿತ್ರರಂಗ ತೆರೆವುಗೊಳಿಸಲು ತೀರ್ಮಾನಿಸಲಾಗಿದೆ.
ಇತ್ತೀಚೆಗೆ ಮನು ಮೇಲೆ ಸ್ನೇಹಿತೆಯೇ ಅತ್ಯಾಚಾರ ಆರೋಪ ಹೊರಿಸಿದರು. ಬಳಿಕ ಮನು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಯಿತು. ಆ ಆಡಿಯೋದಲ್ಲಿ ಶಿವರಾಜ್ಕುಮಾರ್, ಧ್ರುವ ಸರ್ಜಾ, ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಮನುಗೆ ಬಿಗ್ ರಿಲೀಫ್ ಸಿಕ್ಕಿದೆ.
ಆಡಿಯೋ ವೈರಲ್ ಆದ ಬೆನ್ನಲೇ 100ಕ್ಕೂ ಅಧಿಕ ಕೇಸ್ಗಳು ಮನು ಮೇಲೆ ದಾಖಲಿಸಲಾಗಿತ್ತು. ಚಿತ್ರರಂಗದಿಂದ ಮನು ಅವರನ್ನು ಬ್ಯಾನ್ ಮಾಡಬೇಕು ಎಂದು ಶಿವರಾಜ್ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಅವರ ಅಭಿಮಾನಿಗಳು ಒತ್ತಾಯಿಸಿದ್ದರು.
ಈ ಮೂವರೂ ಸ್ಟಾರ್ ಕಲಾವಿದರ ಬಳಿ ಕ್ಷಮೆ ಕೇಳಲು ಮಡೆನೂರು ಮನು ಮುಂದಾದರು. ಕ್ಷಮೆ ಕೇಳಲು ಶಿವರಾಜ್ಕುಮಾರ್ ಮನೆ ಮುಂದೆ ಅವರು ಕಾದಿದ್ದರು. ಆದರೆ ಶಿವಣ್ಣನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದೀಗ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಮನು ಭೇಟಿ ಆಗಿದ್ದಾರೆ. ಮೂವರೂ ನಟರಿಗೆ ಕ್ಷಮೆ ಕೋರಿ ಮನು ಪತ್ರ ಬರೆದಿದ್ದಾರೆ.
ಮಡೆನೂರು ಮನು ಕ್ಷಮೆ ಕೇಳಿ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅವರಿಗೆ ಒಂದು ಅವಕಾಶ ನೀಡುವುದಾಗಿ ಉಮೇಶ್ ಬಣಕಾರ್ ಹೇಳಿದ್ದಾರೆ. ‘ಮನು ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾಯಶ್ಚಿತ್ತ, ಪಾಪಪ್ರಜ್ಞೆ ಅವರಿಗೆ ಕಾಡಿದೆ. ಈ ಕ್ಷಮಾಪಣೆಯ ಕಾಗದ ನೀಡಿದ್ದಾರೆ. ಬಹಿರಂಗವಾಗಿ ಅವರು ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅವಕಾಶ ಮಾಡಿಕೊಡಿ ಅಂತ ಅವರು ಮನವಿ ಮಾಡಿದ್ದಾರೆ. ಅದನ್ನು ಪುರಸ್ಕರಿಸುತ್ತೇವೆ’ ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.