ಹೊಸ ದಿಗಂತ ಡಿಜಿಟಲ್ ಡೆಸ್ಕ್:
2023ರಲ್ಲಿ ಕೋಮುಲ್ ನೇಮಕಾತಿ ಹಗರಣ ಸಂಬಂಧ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ಆಸ್ತಿಯನ್ನು ಇ.ಡಿ (ED) ಮುಟ್ಟುಗೋಲು ಹಾಕಿಕೊಂಡಿದೆ. ಕೆ.ವೈ.ನಂಜೇಗೌಡ ಹಾಗೂ ಇತರರಿಗೆ ಸೇರಿದ ಒಟ್ಟು 1.32 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಈ ಬಗ್ಗೆ ಇಡಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
2023ರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (KOMUL) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಿದ್ದು, ಜುಲೈ 16, 2025ರಂದು ಅಧಿಕೃತವಾಗಿ ಈ ಮೌಲ್ಯದ ಆಸ್ತಿಯನ್ನು ಜಪ್ತಿಗೊಳಿಸಲಾಗಿದೆ ಎಂದು ED ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ಕೋಮುಲ್ ನೇಮಕಾತಿಯಲ್ಲಿ ಹಗರಣ ಸಂಬಂಧ ಸುಮಾರು 75 ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ರಾಜಕಾರಣಿಗಳ ಶಿಫಾರಸು ಪತ್ರ ನೀಡಲಾಗಿತ್ತು. ಇ.ಡಿ ದಾಳಿ ವೇಳೆ ಶಿಫಾರಸು ಪತ್ರ ಸಮೇತ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ನಂಜೇಗೌಡ ಮನೆ ಮೇಲೆ ಇಡಿ ದಾಳಿ ಮಾಡಿತ್ತು.
ಕೋಮುಲ್ ಒಕ್ಕೂಟದ 13 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಮಂದಿ ಜಯ ಸಾಧಿಸುವುದರೊಂದಿಗೆ ಕೋಮುಲ್ ಕಾಂಗ್ರೆಸ್ ವಶವಾಗಿತ್ತು. ಜೆಡಿಎಸ್ – ಬಿಜೆಪಿ ಮೈತ್ರಿಕೂಟದ 4 ಜನ ನಿರ್ದೇಶಕರು ಮಾತ್ರ ಗೆದ್ದಿದ್ದರು. ಇನ್ನು ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ಅಧ್ಯಕ್ಷರಾಗಿ ಕಾಂಗ್ರೆಸ್ ಶಾಸಕ ಮಾಲೂರಿನ ಕೆ.ವೈ. ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.