February 2, 2026
Monday, February 2, 2026
spot_img

ಟಿ20 ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿದ್ದ ಶ್ರೀಲಂಕಾಕ್ಕೆ ಬಿಗ್ ಶಾಕ್: ಭುಜದ ಗಾಯಕ್ಕೆ ತುತ್ತಾದ ಯುವ ವೇಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿದ್ದ ಶ್ರೀಲಂಕಾ ತಂಡದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ಇಂಗ್ಲೆಂಡ್ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಯುವ ವೇಗದ ಬೌಲರ್ ಇಶಾನ್ ಮಾಲಿಂಗಾ ಭುಜದ ಗಾಯಕ್ಕೆ ಒಳಗಾಗಿದ್ದಾರೆ.

24ರ ವಯಸ್ಸಿನ ಈ ವೇಗಿ ಗಾಯದ ಕಾರಣದಿಂದಾಗಿ ಮುಂದಿನ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಇನ್ನು ಕೇವಲ ಒಂದು ವಾರ ಮಾತ್ರ ಅವಧಿ ಇದೆ. ತಂಡದ ವೈದ್ಯಕೀಯ ಸಿಬ್ಬಂದಿ ಅವರ ಗಾಯದ ಗಂಭೀರತೆಯನ್ನು ಮೌಲ್ಯಮಾಪನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅವರ ಫಿಟ್ನೆಸ್ ಸ್ಥಿತಿಯ ಕುರಿತು ಸ್ಪಷ್ಟತೆ ಸಿಗಲಿದೆ.

ಮಳೆ ವಿಳಂಬದ ಬಳಿಕ ಇಂಗ್ಲೆಂಡ್ ತಂಡದ ರನ್‌ಚೇಸ್‌ನ ಎಂಟನೇ ಓವರ್‌ನಲ್ಲಿ ಇಶಾನ್ ಮಲಿಂಗಾ ಗಾಯಕ್ಕೆ ತುತ್ತಾಗಿದ್ದರು. ಬೌಲ್‌ ಮಾಡುವ ವೇಳೆ ಅವರು ಎಡಗೈ ಭುಜ ತಿರುಗಿಸಿಕೊಂಡಂತೆ ಕಾಣಿಸಿಕೊಂಡಿದ್ದು, ಅದರಿಂದ ತೀವ್ರ ನೋವಿಗೆ ಒಳಗಾದರುಬೌಲ್‌ ರಿಲೀಸ್‌ ಮಾಡಿದ ತಕ್ಷಣವೇ ಮಾಲಿಂಗಾ ತಮ್ಮ ಭುಜವನ್ನು ಹಿಡಿದುಕೊಂಡು ಫಾಲೋ ಥ್ರೂ ವೇಳೆ ನೆಲಕ್ಕೆ ಕುಸಿದರು. ಇದನ್ನು ಗಮನಿಸಿದ ತಂಡದ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಮೈದಾನಕ್ಕೆ ಧಾವಿಸಿ ಚಿಕಿತ್ಸೆ ನೀಡಿದರು. ಗಾಯದ ತೀವ್ರತೆಯ ಹಿನ್ನೆಲೆಯಲ್ಲಿ ಯುವ ವೇಗಿ ಪಂದ್ಯವನ್ನು ಮಧ್ಯದಲ್ಲೇ ತೊರೆದು ಮೈದಾನದಿಂದ ಹೊರನಡೆದರು.

ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಹೇಳಿದ್ದೇನು?
ಇಶಾನ್ ಮಾಲಿಂಗಾಗೆ ಉಂಟಾದ ಗಾಯದ ಗಂಭೀರತೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ದೃಢಪಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಎಸ್‌ಎಲ್‌ಸಿ, ಯುವ ವೇಗಿಗೆ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳನ್ನು ನೀಡಬೇಕಾಗಿದ್ದು, ಕೊಲಂಬೊಗೆ ಮರಳಿದ್ದಾರೆ. ಅವರ ಭುಜಕ್ಕೆ ಎಂಆರ್‌ಐ ಸ್ಕ್ಯಾನ್ ನಡೆಸಲಾಗುವುದು ಎಂದು ಕ್ರಿಕೆಟ್‌ ಮಂಡಳಿ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !