ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಬುಧವಾರ ಆರಂಭವಾಗಲಿದೆ.
ಈ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ನಾಯಕ ರೋಹಿತ್ ಶರ್ಮ ಅವರಿಗೆ ಅಭ್ಯಾಸದ ವೇಳೆ ಕೈ ಬೆರಳಿಗೆ ಗಾಯಗೊಂಡಿದ್ದು ಫೈನಲ್ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ.
ಮಂಗಳವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ರೋಹಿತ್ ಶರ್ಮ ಅವರು ಎಡಗೈಯ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಗಾಯಗೊಂಡ ತಕ್ಷಣ ಅವರು ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಸದ್ಯ ಗಾಯದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಪ್ರಾಥಮಿಕ ವರದಿ ಪ್ರಕಾರ ಗಾಯದ ಪ್ರಮಾಣ ಗಂಭೀರವಾದಂತೆ ತೋರುತ್ತಿದೆ. ಇದೇ ಕಾರಣಕ್ಕೆ ಅವರು ಅಭ್ಯಾಸವನ್ನು ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ.
ಒಂದೊಮ್ಮೆ ಅವರ ಗಾಯ ಗಂಭೀರ ಸ್ವರೂಪದಿಂದ ಕೂಡಿದ್ದರೆ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ರಾಹುಲ್ ಕೂಡ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ರೋಹಿತ್ ಕೂಡ ಲಭ್ಯವಾಗದಿದ್ದರೆ ಬ್ಯಾಟಿಂಗ್ ಆರ್ಡರ್ನಲ್ಲಿ ಸಮಸ್ಯೆಯಾಗಲಿದೆ. ರೋಹಿತ್ ಅವರು ಈ ಪಂದ್ಯದಿಂದ ಹೊರಗುಳಿದರೆ ಆಗ ಚೇತೇಶ್ವರ್ ಪೂಜಾರ ಅಥವಾ ವಿರಾಟ್ ಕೊಹ್ಲಿ ಅವರು ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.