Sunday, January 11, 2026

ಟೀಮ್ ಇಂಡಿಯಾಗೆ ಬಿಗ್ ಶಾಕ್: ನ್ಯೂಜಿಲೆಂಡ್ ಸರಣಿ ಆರಂಭಕ್ಕೂ ಮುನ್ನವೇ ಪಂತ್‌ಗೆ ಗಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅಭ್ಯಾಸದ ವೇಳೆ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ.

ನಾಳೆ (ಜೂನ್ 11) ಮೊದಲ ಪಂದ್ಯ ನಡೆಯಲಿದ್ದು, ತಂಡವು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಸುಮಾರು 50 ನಿಮಿಷಗಳ ಕಾಲ ಆಕ್ರಮಣಕಾರಿ ಬ್ಯಾಟಿಂಗ್ ನಡೆಸುತ್ತಿದ್ದ ಪಂತ್, ಥ್ರೋ-ಡೌನ್ ಸ್ಪೆಷಲಿಸ್ಟ್ ಎಸೆದ ಚೆಂಡನ್ನು ಎದುರಿಸುವಾಗ ನಿಯಂತ್ರಣ ತಪ್ಪಿದ್ದಾರೆ. ವೇಗವಾಗಿ ಬಂದ ಚೆಂಡು ಅವರ ಸೊಂಟದ ಭಾಗಕ್ಕೆ ಬಲವಾಗಿ ಬಡಿದಿದೆ. ತೀವ್ರ ನೋವಿನಿಂದ ಬಳಲಿದ ಪಂತ್ ತಕ್ಷಣವೇ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮೈದಾನದಿಂದ ಹೊರನಡೆದಿದ್ದಾರೆ.

ಕೆಎಲ್ ರಾಹುಲ್ ನಂತರ ಪ್ರಮುಖ ವಿಕೆಟ್ ಕೀಪರ್ ಆಯ್ಕೆಯಾಗಿರುವ ಪಂತ್ ಅವರ ಗಾಯದ ತೀವ್ರತೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ವೈದ್ಯಕೀಯ ತಂಡವು ಅವರ ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಿದ್ದು, ಗಾಯ ಗಂಭೀರವಾಗಿದ್ದರೆ ಅವರು ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಇದು ತಂಡದ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಪಂತ್ ಅವರಿಗೆ ಗಾಯದ ಸಮಸ್ಯೆ ಹೊಸದೇನಲ್ಲ. 2025ರ ಇಂಗ್ಲೆಂಡ್ ಪ್ರವಾಸದ ವೇಳೆ ಲಾರ್ಡ್ಸ್ ಮತ್ತು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಗಳ ಸಂದರ್ಭದಲ್ಲೂ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಇದೀಗ ಪ್ರಮುಖ ಸರಣಿಗೂ ಮುನ್ನವೇ ಅವರು ಮತ್ತೆ ಅಶಕ್ತರಾಗಿರುವುದು ಭಾರತದ ಪ್ಲೇಯಿಂಗ್ ಇಲೆವೆನ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.

ಸದ್ಯ ಇಡೀ ಕ್ರಿಕೆಟ್ ಲೋಕ ವಡೋದರಾದಿಂದ ಹೊರಬರುವ ಅಧಿಕೃತ ವೈದ್ಯಕೀಯ ವರದಿಗಾಗಿ ಕಾಯುತ್ತಿದೆ. ಪಂತ್ ಚೇತರಿಸಿಕೊಳ್ಳದಿದ್ದರೆ ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬದಲಿ ಆಟಗಾರನನ್ನು ಹುಡುಕುವ ಅನಿವಾರ್ಯತೆ ಎದುರಾಗಲಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!