ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಅವರ ಕೊನೆಯ ಅಭಿನಯದ ‘ಜನ ನಾಯಗನ್’ ಸಿನಿಮಾ ಜುಲೈ 23ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಚಿತ್ರದ ಕುರಿತು ಇದೀಗ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬುವಂತಹ ಮಾಹಿತಿಯೊಂದು ಹೊರಬಿದ್ದಿದೆ.
ಚೆನ್ನೈನಲ್ಲಿ ಜುಲೈ 27ರಂದು ಆಯೋಜಿಸಲಾಗಿದ್ದ ಯಶಸ್ವಿ ಸಂಭ್ರಮಾಚರಣೆ (ಸಕ್ಸಸ್ ಮೀಟ್) ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಹೆಚ್. ವಿನೋದ್, ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗೆ ಹೆಚ್ಚುವರಿ ದೃಶ್ಯಗಳನ್ನು ಸೇರಿಸುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.
ಚಿತ್ರದಲ್ಲಾಗಲಿದೆ 6 ಡಿಲೀಟೆಡ್ ದೃಶ್ಯಗಳ ಸೇರ್ಪಡೆ!
ಕಾರ್ಯಕ್ರಮದ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕರು, ಸಂಪಾದನೆ (ಎಡಿಟಿಂಗ್) ಸಮಯದಲ್ಲಿ ಕೈಬಿಡಲಾಗಿದ್ದ ಒಟ್ಟು 6 ರೋಚಕ ಸೀನ್‌ಗಳನ್ನು ಶೀಘ್ರದಲ್ಲೇ ಮತ್ತೆ ಥಿಯೇಟರ್‌ಗಳಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಇವುಗಳಲ್ಲಿ ವಿಜಯ್ ಅವರ ಅಭಿನಯದ 2 ಹಾಸ್ಯ ದೃಶ್ಯಗಳು, 2 ಸಾಹಸ ದೃಶ್ಯಗಳು ಹಾಗೂ 2 ಭಾವುಕ ಸನ್ನಿವೇಶಗಳು ಸೇರಿವೆ.
ನಿರ್ಮಾಣ ಸಂಸ್ಥೆಯು ಈ ಯೋಜನೆಯನ್ನು ಅಂತಿಮಗೊಳಿಸುತ್ತಿದ್ದು, ತಾಂತ್ರಿಕವಾಗಿ ನಾನು ಸಂಪೂರ್ಣ ಸಿದ್ಧನಾಗಿದ್ದೇನೆ ಎಂದು ವಿನೋದ್ ತಿಳಿಸಿದ್ದಾರೆ. ಈ ಮೂಲಕ ಮುಂದಿನ ವಾರದಿಂದಲೇ ಪ್ರೇಕ್ಷಕರು ಬೆಳ್ಳಿಪರದೆಯ ಮೇಲೆ ಈ ಹೊಸ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.



