ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನವವಿವಾಹಿತೆ ಗಾನವಿ ಹಾಗೂ ಆಕೆಯ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನೇದಿನೇ ಹೊಸ ತಿರುವು ಪಡೆಯುತ್ತಿದೆ. ಗಾನವಿ ಸಾವಿನ ಕೆಲವೇ ದಿನಗಳಲ್ಲಿ ಸೂರಜ್ ನಾಗಪುರದಲ್ಲಿ ಪ್ರಾಣ ಕಳೆದುಕೊಂಡಿದ್ದು ಈಗಾಗಲೇ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಸೂರಜ್ ಸಹೋದರ ಗಾನವಿ ಪೋಷಕರ ವಿರುದ್ಧ ಮಹಾರಾಷ್ಟ್ರದಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಸೂರಜ್ ಸಾವಿನ ಬಳಿಕ ಅವರ ಸಹೋದರ ನಾಗಪುರದ ಸೋನೆಗಾವ್ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಸಾವಿಗೆ ಗಾನವಿ ಕುಟುಂಬಸ್ಥರೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಗಾನವಿ ಕಡೆಯವರು ನಿರಂತರವಾಗಿ ಬೆದರಿಕೆ ಹಾಕಿದ್ದರು, ಅವಮಾನ ಹಾಗೂ ಮಾನಸಿಕ ಕಿರುಕುಳ ನೀಡಿದ್ದರು. ಅದನ್ನೇ ತಾಳಲಾರದೆ ಸೂರಜ್ ಈ ತೀರ್ಮಾನಕ್ಕೆ ಬಂದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಸೂರಜ್ ಜೊತೆ ಗಾನವಿ ಹಸೆಮಣೆ ಏರುವ ಮುನ್ನ ಹರ್ಷಾ ಎಂಬಾತನನ್ನ ಪ್ರೀತಿ ಮಾಡ್ತಿದ್ದಳು. ಆತನನ್ನೇ ಮದುವೆಯಾಗಲು ಬಯಸಿದ್ದಳು ಎಂದು ಸೂರಜ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಶ್ರೀಲಂಕಾಗೆ ಹನಿಮೂನ್ಗೆಂದು ಹೋಗಿದ್ದ ಈ ಜೋಡಿ ವಾಪಸ್ ಆಗಿದ್ದು ಕೂಡ ಇದೇ ಕಾರಣಕ್ಕೆ. ಹನಿಮೂನ್ನಲ್ಲಿ ತನ್ನ ಲವ್ ಸ್ಟೋರಿ ಬಗ್ಗೆ ಹೇಳಿದ್ದಳು. ಹೀಗಾಗಿಯೇ ಹನಿಮೂನ್ಗೆ ಹೋಗಿದ್ದವರು ಅರ್ಧಕ್ಕೆ ವಾಪಸ್ ಆಗಿದ್ದರು ಎಂದು ಸೂರಜ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಈ ಸಂಬಂಧ ಸೂರಜ್ ಕುಟುಂಬದವರು ಈಗಾಗಲೇ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸದ್ಯ ನಾಗಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣವನ್ನು ಮುಂದಿನ ಹಂತದಲ್ಲಿ ಬೆಂಗಳೂರಿಗೆ ವರ್ಗಾಯಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಪೊಲೀಸರು ಪ್ರಕರಣದ ಮೇಲೆ ನಿಗಾ ವಹಿಸಿದ್ದಾರೆ.

