October 18, 2026
Sunday, October 18, 2026
spot_img

ನೋಯ್ಡಾದ ಒಂದೇ ಕುಟುಂಬದ 5 ಮಂದಿ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್: ಡೆತ್‌ನೋಟ್ ಆಡಿಯೋದಲ್ಲಿ ಬಯಲಾಯ್ತು ರಹಸ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶನಿವಾರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಗ್ರೇಟರ್ ನೋಯ್ಡಾದ ಒಂದೇ ಕುಟುಂಬದ ಐವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಇದು ಕೇವಲ ಆಹಾರ ಫುಡ್ ಪಾಯ್ಸನ್‌ನಿಂದ ಸಂಭವಿಸಿದ ಸಾವು ಎನ್ನಲಾಗಿತ್ತು. ಆದರೆ, ಮೃತನ ಮೊಬೈಲ್‌ನಲ್ಲಿ ಸಿಕ್ಕಿರುವ ಆಘಾತಕಾರಿ ವಾಯ್ಸ್ ನೋಟ್‌ನಿಂದ ಈಗ ಇಡೀ ಕಥೆಯನ್ನೇ ಬದಲಾಯಿಸಿದ್ದು, ಇದು ಸಾಮೂಹಿಕ ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ರಬುಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಗ್ಲಾ ಶ್ರೀ ಪದಮ್ ಗ್ರಾಮದ ಮಹೇಶ್ (37), ಅವರ ಪತ್ನಿ ಲಲಿತಾ (35), ಮಕ್ಕಳಾದ ಲಡ್ಡು (11), ಮಿಷ್ಟಿ (7) ಮತ್ತು ಸಾಕ್ಷಾತ್ (3) ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು.

ನೂಡಲ್ಸ್ ತಿಂದು ಸತ್ತರೆ ಅಂದುಕೊಂಡಿದ್ದ ಜನಕ್ಕೆ ಕಾದಿತ್ತು ಶಾಕ್

ಶುಕ್ರವಾರ ರಾತ್ರಿ ಈ ಕುಟುಂಬವು ಮನೆಯಲ್ಲಿ ಚಹಾ ಮತ್ತು ನೂಡಲ್ಸ್ ಸೇವಿಸಿತ್ತು. ಮಾರನೇ ದಿನ ಬೆಳಿಗ್ಗೆ ಎಲ್ಲರೂ ಮೃತಪಟ್ಟಿದ್ದರಿಂದ, ಇವರು ತಿಂದ ಆಹಾರದಲ್ಲಿ ವಿಷ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಪೋಸ್ಟ್‌ಮಾರ್ಟಮ್ ವರದಿಯಲ್ಲಿ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ನಿಖರವಾಗಿ ಯಾವ ವಿಷ ಉಣಿಸಲಾಗಿದೆ ಅಥವಾ ಸೇವಿಸಲಾಗಿದೆ ಎಂಬುದನ್ನು ಪತ್ತೆಹಚ್ಚಲು ವಿಜ್ಞಾನಿಗಳು ಮೃತರ ಒಳಾಂಗಣದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿದ್ದಾರೆ.

ಮೊಬೈಲ್‌ನಲ್ಲಿದ್ದ ಆಡಿಯೋ ಬಿಚ್ಚಿಟ್ಟಿತು ರಹಸ್ಯ

ಪೊಲೀಸರು ತನಿಖೆ ನಡೆಸುತ್ತಿದ್ದಾಗ ಮೃತ ಮಹೇಶ್ ಅವರ ಮೊಬೈಲ್ ಫೋನ್‌ನಲ್ಲಿ ಒಂದು ವಾಯ್ಸ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಅವರು, ತಮ್ಮ ಇಬ್ಬರು ಸಹೋದರಿಯರು ಮತ್ತು ಒಬ್ಬ ಭಾವ ತಮಗೆ ನೀಡುತ್ತಿದ್ದ ನಿರಂತರ ಕಿರುಕುಳವೇ ತಮ್ಮ ಕುಟುಂಬದ ಈ ದುಸ್ಥಿತಿಗೆ ಕಾರಣ ಎಂದು ಕಣ್ಣೀರು ಹಾಕಿದ್ದಾರೆ. ಹಲವು ದಿನಗಳಿಂದ ನಡೆಯುತ್ತಿದ್ದ ಆಸ್ತಿ ವಿವಾದದಿಂದಾಗಿ ಕುಟುಂಬವು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿತ್ತು ಎಂಬ ಸತ್ಯ ಬಯಲಾಗಿದೆ.

ಇದನ್ನೂ ಓದಿ:

ದೂರಿನ ಬೆನ್ನಲ್ಲೇ ಮೂವರ ಬಂಧನ

ಮಹೇಶ್ ಅವರ ಮತ್ತೊಬ್ಬ ಭಾವ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ವಾಯ್ಸ್ ನೋಟ್‌ನಲ್ಲಿ ಹೆಸರಿಸಲಾದ ಮೂವರು ಆರೋಪಿ ಸಂಬಂಧಿಕರನ್ನು ಬಂಧಿಸಿದ್ದಾರೆ. ಇವರು ಮಹೇಶ್ ಕುಟುಂಬಕ್ಕೆ ಆಸ್ತಿ ವಿಚಾರವಾಗಿ ನಿರಂತರವಾಗಿ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಸ್ತುತ ಪೊಲೀಸರು ಈ ಪ್ರಕರಣವನ್ನು ಕೊಲೆಯೋ ಅಥವಾ ಕಿರುಕುಳ ತಾಳಲಾರದೆ ಮಾಡಿಕೊಂಡ ಆತ್ಮಹತ್ಯೆಯೋ ಎಂಬ ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ನಂತರ ಇಡೀ ದುರಂತದ ಹಿಂದಿರುವ ಅಸಲಿ ಸತ್ಯ ಹೊರಬರಲಿದೆ.

Must Read