ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ದೂರಿನಲ್ಲಿದೆ ಅಚ್ಚರಿಯ ಮಾಹಿತಿ!

ಹೊಸದಿಗಂತ ವರದಿ ಮಂಗಳೂರು: 

ಕೂಳೂರು ಸೇತುವೆ ಬಳಿ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಉದ್ಯಮಿ ಮುಮ್ತಾಜ್ ಅಲಿ ಅವರ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಸಾಮಾಜಿಕ – ಧಾರ್ಮಿಕ ಮುಂದಾಳು ಮುಮ್ತಾಜ್ ಅಲಿ ಅವರನ್ನು ನಿರಂತರವಾಗಿ ಬೆದರಿಸಿ, ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣವನ್ನು ಕಿತ್ತುಕೊಂಡು ಮತ್ತಷ್ಟು ಹಣಕ್ಕೆ ಬೆದರಿಕೆಯಿಟ್ಟ ಆರೋಪಿದಲ್ಲಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (BNSS) 173ರ ಅಡಿ ಎಫ್ ಐ ಆರ್ ದಾಖಲಾಗಿದೆ.

ಮುಮ್ತಾಜ್ ಅಲಿ ಅವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತಪಡಿಸಿ ಅವರ ಸಹೋದರ ಹೈದರ್ ಅಲಿ ಎಂಬವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯನ್ನು ಬಳಸಿಕೊಂಡು ದುರುದ್ದೇಶದಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ರೆಹಮತ್ ಸೇರಿದಂತೆ, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ನನ್ನ ಸಹೋದರ ಮುಮ್ತಾಜ್ ಅಲಿ ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದು, ಕಳೆದ 30 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದರು. ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹಲವು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದು, ಅವರ ಪ್ರಸಿದ್ದಿಯನ್ನು ಹಾಳು ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಸೇರಿಕೊಂಡು ಅವರು ಆತ್ಮಹತ್ಯೆಗೆ ಶರಣಾಗುವಂತೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಪೈಕಿ ರೆಹಮತ್ ಎಂಬವರು ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಪ್ರಚಾರ ಮಾಡಿ ಹೆಸರನ್ನು ಹಾಳು ಮಾಡುತ್ತೇನೆ ಎಂದು ಹೆದರಿಸಿ 2024 ರ ಜುಲೈ ಯಿಂದ ಇದುವರೆಗೂ 50 ಲಕ್ಷ ರೂ.ಗಿಂತಲು ಅಧಿಕ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆದರಿಸಿ 25 ಲಕ್ಷ ರೂ. ಹಣವನ್ನು ಚೆಕ್‌ ಮೂಲಕ ಪಡೆದುಕೊಂಡಿದ್ದಾರೆ ಎಂದು ಹೈದರ್ ಅಲ್ಲಿ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಈ ಮೊದಲು ಮುಮ್ತಾಜ್ ಅಲ್ಲಿಯವರಿಗೆ ದೈಹಿಕವಾಗಿ ಹಲ್ಲೆ ಮಾಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಿರುವ ಅವರು, ಸತ್ತಾ‌ರ್ ಎಂಬಾತ ಮುಮ್ತಾಜ್ ಅಲಿ ಅವರ ರಾಜಕೀಯ ವಿರೋಧಿಯಾಗಿದ್ದು ಅವರನ್ನು ರಾಜಕೀಯವಾಗಿಯೂ ಮುಗಿಸಬೇಕೆಂದು ರೆಹಮತ್ ಅವರೊಂದಿಗೆ ಸೇರಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!