ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 12 ಈಗ 50 ದಿನಗಳನ್ನು ದಾಟಿದೆ ಮತ್ತು ಆಟ ದಿನದಿಂದ ದಿನಕ್ಕೆ ಕಠಿಣವಾಗುತ್ತಿರುವ ನಡುವೆ ಮನೆಯ ವಾತಾವರಣ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದೆ. ಈ ನಡುವೆ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಪ್ರವೇಶಿಸಿದ್ದ ರಿಷಾ ಈಗ ಮನೆಯಿಂದ ಹೊರಬಿದ್ದಿದ್ದಾರೆ. ಆರಂಭದಲ್ಲಿ ತೀವ್ರ ರೋಷದಲ್ಲಿ ಮನೆಗೆ ಬಂದ ರಿಷಾ, ದಿನಗಳು ಕಳೆದಂತೆ ಎಲ್ಲಾ ಸ್ಪರ್ಧಿಗಳ ಜೊತೆ ಜಗಳಗಳಿಂದ ಮನೆಯಲ್ಲೇ ಗಲಿಬಿಲಿ ಸೃಷ್ಟಿಸಿದ್ದರು. ತಮ್ಮ ಅಸ್ತಿತ್ವವನ್ನು ತೋರಿಸಿಕೊಳ್ಳಲು ಮಾಡಿದ ಪ್ರಯತ್ನವೇ ಕೆಲವೊಮ್ಮೆ ಹೆಚ್ಚು ಗದ್ದಲಕ್ಕೆ ಕಾರಣವಾಗಿತ್ತು.
ಗಿಲ್ಲಿ ನಟನೊಂದಿಗೆ ನಡೆದ ಜಗಳದಿಂದ ರಿಷಾ ಮತ್ತಷ್ಟು ವಿವಾದಕ್ಕೆ ಗುರಿಯಾದರು. ಬಾತ್ ರೂಮ್ ಬಳಿ ಗಿಲ್ಲಿ ಕೇಳಿದ ಮಾತುಗಳಿಗೆ ಸ್ಪಂದಿಸದ ರಿಷಾ ಮೇಲೆ ಸಿಟ್ಟು ತೋರಿದ ಗಿಲ್ಲಿ, ಅವರ ಬಟ್ಟೆಗಳನ್ನು ಬಾತ್ ರೂಮ್ ಬಳಿ ಎಸೆದರು. ಇದನ್ನು ನೋಡಿ ಸಿಟ್ಟಾಗಿದ್ದ ರಿಷಾ, ಗಿಲ್ಲಿಗೆ ಹೊಡೆದ ಘಟನೆ ಮನೆಯಲ್ಲಿ ದೊಡ್ಡ ಮಾತಾಗಿತ್ತು.
ಬಳಿಕ ರಿಷಾ ಗಿಲ್ಲಿಯ ಬಟ್ಟೆಯನ್ನು ಎಳೆದು, ಕಿತ್ತು, ಕಾಲಿನಿಂದ ಚೆಲ್ಲಾಪಿಲ್ಲಿ ಮಾಡಿದ ಘಟನೆ ಕೂಡ ಮನೆಯಲ್ಲಿ ಉದ್ವಿಗ್ನತೆ ಹೆಚ್ಚಿಸಿತು. ಈ ವರ್ತನೆಯ ಬಗ್ಗೆ ಕಿಚ್ಚ ಸುದೀಪ್ ವೀಕೆಂಡ್ ಕ್ಲಾಸ್‌ನಲ್ಲಿ ತೀವ್ರವಾಗಿ ಪ್ರಶ್ನಿಸಿ, ರಿಷಾಗೆ 24 ಗಂಟೆಗಳ ಜೈಲು ಶಿಕ್ಷೆ ಹಾಗೂ ನೇರ ನಾಮಿನೇಷನ್ ನೀಡುವಂತೆ ಆದೇಶಿಸಿದರು. ಈ ಎಲ್ಲ ಘಟನೆಗಳ ಸರಮಾಲೆಯ ಬಳಿಕ ರಿಷಾ ಈಗ ಮನೆಯಿಂದ ಹೊರಬಿದ್ದಿದ್ದಾರೆ.

