ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ 9ನೇ ಸೀಸನ್‌ನ ವಿನ್ನರ್, ನಟ ರೂಪೇಶ್ ಶೆಟ್ಟಿ ಭಾನುವಾರ ತವರಿಗೆ ಆಗಮಿಸಿದ್ದು, ಅವರನ್ನು ಅದ್ದೂರಿಯಾಗಿ ಸ್ವಾಗತಿಸಿಸಲಾಯಿತು.
ಬೆಂಗಳೂರಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರೂಪೇಶ್ ಶೆಟ್ಟಿ ಅವರನ್ನು ಅವರ ಅಭಿಮಾನಿಗಳು, ಗೆಳೆಯರು, ಹಿತೈಷಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಚೆಂಡೆವಾದನದ ನಡುವೆ ಹೂಗುಚ್ಛ ನೀಡಿ ಮಂಗಳೂರಿಗೆ ಬರಮಾಡಿಕೊಂಡರು.
ಬಳಿಕ ನಗರದ ಕೇಂದ್ರ ಮೈದಾನದಿಂದ ತೆರೆದ ವಾಹನದಲ್ಲಿ ರೂಪೇಶ್ ಶೆಟ್ಟಿ ಅವರನ್ನು ನಗರದಲ್ಲಿ ಮೆರವಣಿಗೆ ಮಾಡಲಾಯಿತು. ವಿಮಾನ ನಿಲ್ದಾಣ ಹಾಗೂ ನಗರದ ವಿವಿಧ ಕಡೆ ಯುವ ಸಮೂಹ ಹಾಗೂ ಅಭಿಮಾನಿಗಳು ರೂಪೇಶ್ ಶೆಟ್ಟಿ ಅವರ ಜತೆ ಸೆಲ್ಫಿಗೆ ಮುಗಿಬಿದ್ದರು.
ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ರೂಪೇಶ್ ಶೆಟ್ಟಿ, ನಾನು ತುಳುನಾಡಿನವನಾಗಿ ನನಗೆ ಕರಾವಳಿಯ ಜನತೆ ಭಾರಿ ಬೆಂಬಲ ನೀಡಿದ್ದಾರೆ. ಅದಕ್ಕಾಗಿ ಸಂಬಂಧಪಟ್ಟ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಇದುವರೆಗೆ ರಾಜ್ಯಾದ್ಯಂತ ಎಲ್ಲರೂ ಬೆಂಬಲ ಸೂಚಿಸಿದ್ದು, ಒಟಿಟಿ ಮತ್ತು ಪರದೆಯ ಮೇಲೆ ನನಗೆ ಅತಿ ಹೆಚ್ಚು ಮತ ದೊರೆತಿದೆ. ಇದುವರೆಗೆ ಯಾರೂ ಈ ದಾಖಲೆಯನ್ನು ಮಾಡಿಲ್ಲ. ಜಿಲ್ಲೆಯ ಜನರ ಬೆಂಬಲ ಅತಿ ಹೆಚ್ಚಾಗಿ ಸಿಕ್ಕಿದೆ ಎಂದರು.
ಬಿಗ್‌ಬಾಸ್ ಸ್ಪರ್ಧೆಯಲ್ಲಿ ದೊರೆತಿರುವ ಹಣದ ಶೇ.50 ಪಾಲನ್ನು ಪಾತ್ರ ನಾನು ವೈಯಕ್ತಿಕವಾಗಿ ಬಳಿಸಿಕೊಳ್ಳುತ್ತೇನೆ. ಉಳಿದ ಶೇ. 50 ಭಾಗವನ್ನು, ಈಗಾಗಲೇ ಗುರುತಿಸಿರುವ ಮೂವರಿಗೆ ಮನೆ ನಿರ್ಮಾಣ ಹಾಗೂ ತುಳು ಮತ್ತು ಕನ್ನಡ ಕಲಾವಿದರಿಗೆ ಕಿಂಚಿತ್ ಸಹಾಯ ಮಾಡಬೇಕೆಂದಿದ್ದೇನೆ.
ನಾನೇ ನಿರ್ಮಾಪಕನಾಗಿ ತಯಾರಿಸಿದ ಸರ್ಕಸ್ ತುಳು ಸಿನಿಮಾ ಸಿದ್ದವಾಗಿದ್ದು, ಅದನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದೇನೆ. ಬಿಗ್‌ಬಾಸ್ ಗೆಲುವಿನ ಬಳಿಕ 4-5 ಸಿನಿಮಾಗಳ ಚಿತ್ರೀಕರಣವಾಗುತ್ತಿದೆ ಎಂದರು.
ಕೊರಗಜ್ಜ ಕ್ಷೇತ್ರಕ್ಕೆ ಭೇಟಿ
ರೂಪೇಶ್ ಶೆಟ್ಟಿ ಅವರು ಮೆರವಣಿಗೆಯಲ್ಲಿ ನಗರದಿಂದ ಕುತ್ತಾರುವಿನ ಕೊರಗಜ್ಜ ಕ್ಷೇತ್ರಕ್ಕೆ ತೆರಳಿದರು. ಈ ವೇಳೆ ಅಭಿಮಾನಿಗಳು ದ್ವಿಚಕ್ರ ವಾಹನ, ಕಾರುಗಳಲ್ಲಿ ಅವರಿಗೆ ಸಾಥ್ ನೀಡಿದರು. ಬಿಗ್‌ಬಾಸ್ ವಿಜೇತನಾದರೆ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ಆಗಮಿಸುವುದಾಗಿ ರೂಪೇಶ್ ಹರಕೆ ಹೊತ್ತಿದ್ದರಂತೆ. ಅದರಂತೆ ಭಾನುವಾರ ಕುತ್ತಾರಿಗೆ ಆಗಮಿಸಿ ಕೊರಗಜ್ಜನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.