ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಈವರೆಗೂ ಶೇ.13.13 ರಷ್ಟು ಮತದಾನವಾಗಿದೆ.
121 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು 3.75 ಕೋಟಿ ಮತದಾರರು 1314 ಅಭ್ಯರ್ಥಿಗಳ ಹಣೆಬರಹವನ್ನು ತೀರ್ಮಾನಿಸಲಿದ್ದಾರೆ.
ಚುನಾವಣಾ ಕಣದಲ್ಲಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, ಆರ್’ಜೆಡಿ ನಾಯಕ, ವಿಪಕ್ಷ ನಾಯಕ ತೇಜಸ್ವಿ ಯಾದವ್, ಲಾಲು ಹಿರಿಯ ಮಗ, ಜನಶಕ್ತಿ ಜನತಾದಳದ ನಾಯಕ ತೇಜ್ ಪ್ರತಾಪ್ ಯಾದವ್ ಇದ್ದಾರೆ. ಮೊದಲ ಹಂತದ ಅಭ್ಯರ್ಥಿಗಳ ಪೈಕಿ ಶೇ.36ರ ಮಂದಿ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.
ಸತತ ಮೂರನೇ ಗೆಲುವು ಸಾಧಿಸಲು ಬಯಸುತ್ತಿರುವ ತೇಜಸ್ವಿ ಯಾದವ್ ಅವರು, ಬಿಜೆಪಿಯ ಸತೀಶ್ ಕುಮಾರ್ ಅವರ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ತಮ್ಮ ಹೊಸ ಪಕ್ಷವಾದ ಜನಶಕ್ತಿ ಜನತಾ ದಳದ ಅಡಿಯಲ್ಲಿ ಮಹುವಾದಿಂದ ಆರ್‌ಜೆಡಿಯ ಮುಖೇಶ್ ರೌಶನ್ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ.
ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಲಖಿಸರೈನಲ್ಲಿ ಸತತ ನಾಲ್ಕನೇ ಗೆಲುವಿನತ್ತ ಕಣ್ಣಿಟ್ಟಿದ್ದರೆ, ಬಿಜೆಪಿಯ ಮಂಗಲ್ ಪಾಂಡೆ ಸಿವಾನ್‌ನಿಂದ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ.

