ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭೆಯ ಮೊದಲ ಹಂತಕ್ಕೆ ಇದೇ 6ರಂದು ಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರದ ಕಣ ರಂಗೇರಿದೆ. ವಿವಿಧ ರಾಜಕೀಯ ಪಕ್ಷಗಳ ಅಗ್ರ ನಾಯಕರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾಜ್ಯದ ವಿವಿಧೆಡೆ ಚುನಾವಣಾ ಪ್ರಚಾರ ಸಭೆ ನಡೆಸಿದರು.
ಬಿಹಾರದ ಭೋಜ್ ಪುರ್ ನ, ಅರಾದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ, ಪ್ರಧಾನಿ ನರೇಂದ್ರ ಮೋದಿ, ಆರ್ ಜೆಡಿ ನೇತೃತ್ವದ ಮಹಾ ಘಟಬಂಧನ್ ಬಿಹಾರದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಟೀಕಿಸಿದರು. ಆರ್ ಜೆಡಿ, ಕಾಂಗ್ರೆಸ್ ಪಕ್ಷಗಳಲ್ಲಿ ಆಂತರಿಕ ಸಂಘರ್ಷವಿದ್ದು ಹಿಂದೂ ಸಂಪ್ರದಾಯಗಳನ್ನು ಅಗೌರವಿಸುತ್ತವೆ. ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆರ್ ಜೆಡಿ ನಾಯಕನನ್ನು ಘೋಷಿಸಲು ಕಾಂಗ್ರೆಸ್ ಎಂದಿಗೂ ಬಯಸಿರಲಿಲ್ಲ. ಆದರೆ ಬಲವಂತದಿಂದ ಹೆಸರು ಘೋಷಿಸಿದೆ ಎಂದು ಹೇಳಿದರು.
ಬಿಹಾರದ ಅಭಿವೃದ್ಧಿಗೆ ಎನ್ ಡಿಎ ಮೈತ್ರಿಕೂಟ ಮತ್ತೊಮ್ಮೆ ಜನಾದೇಶ ಪಡೆಯುವುದು ಅಗತ್ಯವಾಗಿದ್ದು, ಮತದಾರರು ಈ ಬಾರಿಯೂ ರಾಜ್ಯದ ವಿಕಾಸಕ್ಕಾಗಿ ಎನ್ ಡಿಎ ಮೈತ್ರಿಕೂಟವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಬಳಿಕ ನವಾಡಾದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಎನ್ ಡಿಎ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರು. ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ಪಕ್ಷದ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು.
ಪ್ರಧಾನಿ ರೋಡ್ ಶೋ ಸಾಗುವ ಮಾರ್ಗದಲ್ಲಿ, ಮಹಿಳೆಯರು ಆರತಿ ಕೂಡ ಬೆಳಗಿದರು. ಮಹಾಘಟಬಂಧನ್ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇಗುಸರಾಯ್ ನಲ್ಲಿ ಚುನಾವಣಾ ರ‍್ಯಾಲಿ ನಡೆಸಿದರು. ಈ ವೇಳೆ ಅವರು, ಪ್ರತಿಪಕ್ಷಗಳ ಮೈತ್ರಿಕೂಟವನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಬಿಹಾರವನ್ನು ಜಗತ್ತಿನ ಶ್ರೇಷ್ಠ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು. ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಕೈಗೊಂಡ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ದಾರಿ ತಪ್ಪಿಸಿದೆ ಎಂದು ಹೇಳಿದರು.
ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಪ್ರಸಾದ್ ಯಾದವ್ ನಳಂದ, ಶೇಖ್‌ಪುರ, ಲಖಿಸ ರಾಯ್, ಮುಂಗೇರ್, ಬೇಗುಸರಾಯ್, ಪಾಟ್ನಾ, ವೈಶಾಲಿ ಮತ್ತು ಸರನ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 17 ಕಡೆ ಪ್ರಚಾರ ನಡೆಸುತ್ತಿದ್ದಾರೆ.

